ADVERTISEMENT

Ashwin Century: ಒಂದೇ ಟೆಸ್ಟ್‌ನಲ್ಲಿ ಶತಕ, 5 ವಿಕೆಟ್: 3 ಬಾರಿ ಅಶ್ವಿನ್ ಸಾಧನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 11:42 IST
Last Updated 15 ಫೆಬ್ರುವರಿ 2021, 11:42 IST
ಆರ್.ಅಶ್ವಿನ್
ಆರ್.ಅಶ್ವಿನ್    

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರು ಆಕರ್ಷಕ ಶತಕ ಗಳಿಸಿದ್ದಾರೆ.

ಇದೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರು ಐದು ವಿಕೆಟ್‌ ಪಡೆದಿದ್ದಾರೆ. ಒಂದೇಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಹಾಗೂ ಶತಕದ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ, ಅಶ್ವಿನ್ ಅವರು ಮೂರನೇ ಬಾರಿಗೆ ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಸಾಧನೆ ಮಾಡಿದಂತಾಗಿದೆ.

ಅಶ್ವಿನ್ ಅವರು ಈವರೆಗೆ ಒಟ್ಟು 5 ಶತಕ ಗಳಿಸಿದ್ದಾರೆ. ಆ ಪೈಕಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ.

ಅಶ್ವಿನ್ ಅವರು 148 ಎಸೆತಗಳಲ್ಲಿ 106 ರನ್ ಗಳಿಸಿದ್ದಾರೆ. ಇದರಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿವೆ.

ಇಂಗ್ಲೆಂಡ್‌ನ ಮಾಜಿ ಆಟಗಾರ ಇಯಾನ್ ಬೋಥಮ್ ಅವರು ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಸಾಧನೆಯನ್ನು 5 ಬಾರಿ ಮಾಡಿದ್ದಾರೆ.

ಚಿದಂಬರಂ ಕ್ರೀಡಾಂಗಣದಲ್ಲಿ ಶತಕ ಗಳಿಸಿದ ತಮಿಳುನಾಡಿನ ಎರಡನೇ ಆಟಗಾರ ಎಂಬ ದಾಖಲೆಯೂ ಇಂದು ಅಶ್ವಿನ್ ಪಾಲಾಗಿದೆ. ಈ ಹಿಂದೆ ಕೃಷ್ಣಮಾಚಾರಿ ಶ್ರೀಕಾಂತ್ ಅವರು 1986/87ರಲ್ಲಿ ಪಾಕಿಸ್ತಾನದ ವಿರುದ್ಧ 123 ರನ್ ಗಳಿಸಿದ್ದರು.

ವೆಸ್ಟ್ ಇಂಡೀಸ್ ಹೊರತುಪಡಿಸಿ ಬೇರೊಂದು ತಂಡದ ವಿರುದ್ಧ ಅಶ್ವಿನ್ ಶತಕ ದಾಖಲಿಸಿರುವುದೂ ಇದೇ ಮೊದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.