ADVERTISEMENT

IND vs ENG: ಗ್ರೇಮ್ ಸ್ಮಿತ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2021, 10:05 IST
Last Updated 26 ಮಾರ್ಚ್ 2021, 10:05 IST
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ   

ಪುಣೆ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮಗದೊಂದು ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಾಯಕರಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಎಲೈಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರನ್ನು ಹಿಂದಿಕ್ಕಿರುವ ವಿರಾಟ್ ಕೊಹ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಸ್ಮಿತ್ ದಾಖಲೆ ಮುರಿಯಲು 41 ರನ್‌ಗಳ ಅವಶ್ಯಕತೆಯಿತ್ತು. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ 150 ಪಂದ್ಯಗಳಿಂದ 5,416 ರನ್‌ ಪೇರಿಸಿದ್ದರು. ಈ ದಾಖಲೆಯನ್ನೀಗ ಕೊಹ್ಲಿ ಮುರಿದಿದ್ದಾರೆ.

ADVERTISEMENT

ಈ ದಿಗ್ಗಜರ ಪಟ್ಟಿಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮುನ್ನಡೆಸುತ್ತಿದ್ದಾರೆ. ಪಾಂಟಿಂಗ್ 234 ಏಕದಿನ ಪಂದ್ಯಗಳಲ್ಲಿ 8,497 ರನ್‌ ಗಳಿಸಿದ್ದರು. ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಎರಡನೇ ಸ್ಥಾನದಲ್ಲಿದ್ದು, 200 ಪಂದ್ಯಗಳಿಂದ 6,641 ರನ್‌ ಪೇರಿಸಿದ್ದರು. ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ (6,295) ಮತ್ತು ಶ್ರೀಲಂಕಾದ ಅರ್ಜುನ್‌ ರಣತುಂಗಾ (5,608) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಇದ್ದಾರೆ.

ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕೊಹ್ಲಿ ಉಳಿದೆಲ್ಲರಿಗಿಂತ ಉತ್ತಮ ರನ್‌ ಗಳಿಕೆ ಸರಾಸರಿಯನ್ನು ಹೊಂದಿದ್ದಾರೆ. ಏಕದಿನ ಮಾದರಿಯಲ್ಲಿ ನಾಯಕನಾಗಿ ಶೇ. 70ರ ಸರಾಸರಿಯಲ್ಲಿ ರನ್‌ ಗಳಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಅವರದ್ದಾಗಿದೆ. ಹಾಗೆಯೇ 98.55ರ ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿದ್ದಾರೆ.

ಏತನ್ಮಧ್ಯೆ 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಶತಕದ ಬರ ಎದುರಿಸುತ್ತಿದ್ದಾರೆ. ಅವರ ಬ್ಯಾಟ್‌ನಿಂದ 2019ರ ನವೆಂಬರ್‌ ಬಳಿಕ ಒಂದೇ ಒಂದು ಶತಕ ಸಿಡಿದಿಲ್ಲ. ಹಾಗಿದ್ದರೂ ದಾಖಲೆಗಳನ್ನು ಮುರಿಯುವ, ಹೊಸ ದಾಖಲೆಗಳನ್ನು ಬರೆಯುವ ಅವರ ಓಟಕ್ಕೇನೂ ತಡೆ ಬಿದ್ದಿಲ್ಲ. ಇತ್ತೀಚೆಗಷ್ಟೇ ತವರಿನ ಅಂಗಳದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ವೇಗವಾಗಿ 10 ಸಾವಿರ ರನ್‌ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಭಾಜನವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.