ADVERTISEMENT

IND vs NZ | ಮೊದಲ ಟೆಸ್ಟ್‌ನಲ್ಲಿ ಮಿಂಚಿದ್ದ ಇಶಾಂತ್‌ ಎರಡನೇ ಟೆಸ್ಟ್‌ಗೆ ಅನುಮಾನ

ಏಜೆನ್ಸೀಸ್
Published 28 ಫೆಬ್ರುವರಿ 2020, 12:12 IST
Last Updated 28 ಫೆಬ್ರುವರಿ 2020, 12:12 IST
   

ಕ್ರೈಸ್ಟ್‌ಚರ್ಚ್‌:ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಿಂಚಿದ್ದ ಭಾರತದ ವೇಗಿ ಇಶಾಂತ್‌ ಶರ್ಮಾ ಗಾಯಗೊಂಡಿದ್ದು, ಇಲ್ಲಿ ನಾಳೆಯಿಂದ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ವರದಿಗಳ ಪ್ರಕಾರ ಇಶಾಂತ್‌ ಬದಲು ಉಮೇಶ್‌ ಯಾದವ್‌ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಗುರುವಾರ ಕೆಲವೇ ನಿಮಿಷ ನೆಟ್‌ ಪ್ರಾಕ್ಟೀಸ್‌ ಮಾಡಿದ್ದ ಇಶಾಂತ್‌, ಇಂದು ಅಭ್ಯಾಸದಲ್ಲಿ ಭಾಗವಹಿಸಲಿಲ್ಲ. ಜನವರಿಯಲ್ಲಿ ರಣಜಿ ಪಂದ್ಯ ಆಡುವಾಗ ಪಾದಕ್ಕೆ ಪೆಟ್ಟು ಮಾಡಿಕೊಂಡಿದ್ದರು. ನ್ಯೂಜಿಲೆಂಡ್‌ ಸರಣಿ ಆರಂಭವಾಗುವುದು ಇನ್ನೆರಡು ದಿನಗಳಿದ್ದಾಗ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಫಿಟ್‌ನೆಸ್‌ ಸಾಬೀತು ಪಡಿಸಿದ್ದ ಅವರು, ತಡವಾಗಿ ನ್ಯೂಜಿಲೆಂಡ್‌ಗೆ ಆಗಮಿಸಿದ್ದರು. ಮೊದಲ ಟೆಸ್ಟ್‌ ಬಳಿಕ ಮಾತನಾಡಿದ್ದ ಇಶಾಂತ್‌, ಸರಿಯಾಗಿ ನಿದ್ರಿಸಲೂ ಆಗಲಿಲ್ಲ. ಆದರೆ, ತಂಡ ಆಡಲು ಹೇಳಿದ್ದರಿಂದಾಗಿ ಕಣಕ್ಕಿಳಿದಿದ್ದೆ. ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದರು.

31 ವರ್ಷದ ವೇಗಿ ಮುನ್ನೂರು ವಿಕೆಟ್‌ ಸಾಧನೆಯ ಹೊಸ್ತಿಲಲ್ಲಿದ್ದಾರೆ.ಸದ್ಯ 97 ಪಂದ್ಯಗಳ 175 ಇನಿಂಗ್ಸ್‌ಗಳಿಂದ 297 ವಿಕೆಟ್‌ ಉರುಳಿಸಿರುವ ಅವರಿಗೆ ತ್ರಿಶತಕ ಸಾಧನೆಗೆ ಇನ್ನು ಕೇವಲ 3 ವಿಕೆಟ್‌ ಬೇಕಾಗಿದೆ.ಒಂದು ವೇಳೆ ಇಶಾಂತ್‌ ಪಂದ್ಯದಿಂದ ಹೊರಗುಳಿದರೆ ವಿರಾಟ್‌ ಕೊಹ್ಲಿ ಪಡೆಗೆ ಹಿನ್ನಡೆಯಾಗಲಿದೆ. ಅವರು ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿದ್ದರು. ನ್ಯೂಜಿಲೆಂಡ್‌ನಲ್ಲಿ ಭಾರತದ ವೇಗಿಗಳು ವಿಕೆಟ್‌ ಪಡೆಯಲು ವಿಫಲವಾಗುತ್ತಿರುವುದರಿಂದ, ಭಾರತದ ಪಾಳಯದಲ್ಲಿ ಭರವಸೆ ಮೂಡಿಸಿದ್ದರು.

ಉಮೇಶ್‌ ಯಾದವ್‌ ಟೀಂ ಇಂಡಿಯಾ ಪರ ಕಳೆದ ನವೆಂಬರ್‌ನಲ್ಲಿ ಕೊನೆಯ ಸಲ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಆಡಿದ್ದ ಅವರು ಎಂಟು ವಿಕೆಟ್‌ ಉರುಳಿಸಿದ್ದರು.

ರೋಹಿತ್‌ ಶರ್ಮಾ ಬದಲು ಇನಿಂಗ್ಸ್‌ ಆರಂಭಿಸಿರುವ ಹೊಣೆ ಹೊತ್ತಿರುವ ಪೃಥ್ವಿ ಶಾ ಅವರೂ ಪಾದದ ನೋವಿನಿಂದ ಬಳಲುತ್ತಿದ್ದು, ನಾಯಕ ಕೊಹ್ಲಿಗೆ ತಲೆನೋವಾಗಿದೆ.

ವಿಶ್ವದ ನಂ.1 ತಂಡವು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲುವುದರೊಂದಿಗೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿಮೊದಲ ಸೋಲಿನ ಆಘಾತ ಅನುಭವಿಸಿದೆ. ಹೀಗಾಗಿ ನಾಳೆಯಿಂದ ಆರಂಭವಾಗುವ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.