ADVERTISEMENT

IND vs NZ | ಮೂರನೇ ಏಕದಿನ ಕ್ರಿಕೆಟ್ ಪಂದ್ಯ: ‘ಕ್ಲೀನ್‌ ಸ್ವೀಪ್‌’ ತಡೆಯುವ ಸವಾಲು

ಒತ್ತಡದಲ್ಲಿ ಭಾರತ ತಂಡ

ಪಿಟಿಐ
Published 10 ಫೆಬ್ರುವರಿ 2020, 20:06 IST
Last Updated 10 ಫೆಬ್ರುವರಿ 2020, 20:06 IST
ಶ್ರೇಯಸ್‌ ಅಯ್ಯರ್ –ಪಿಟಿಐ ಚಿತ್ರ
ಶ್ರೇಯಸ್‌ ಅಯ್ಯರ್ –ಪಿಟಿಐ ಚಿತ್ರ   

ಮೌಂಟ್‌ ಮಾಂಗಾನೂಯಿ: ಪ್ರಮುಖ ಆಟಗಾರರು ಗಾಯಾಳಾಗಿ ಅಲಭ್ಯರಾದರೂ ನ್ಯೂಜಿಲೆಂಡ್‌ ತಂಡ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 2–0 ಗೆಲುವಿನ ಮುನ್ನಡೆ ಪಡೆದಿದೆ. ನಾಯಕ ಕೇನ್‌ ವಿಲಿಯಮ್ಸನ್‌ ಈಗ ತಂಡಕ್ಕೆ ಮರಳಿದ್ದು, ಆತಿಥೇಯರು ಮಂಗಳವಾರ ಇಲ್ಲಿನ ಬೇ ಓವಲ್‌ನಲ್ಲಿ ಯಲಿರುವ ಅಂತಿಮ ಏಕದಿನ ಪಂದ್ಯವನ್ನೂ ಗೆದ್ದುಕೊಂಡು ‘ಕ್ಲೀನ್‌ ಸ್ವೀಪ್’ ಸಾಧಿಸುವ ಉತ್ಸಾಹದಲ್ಲಿದ್ದಾರೆ.

ಇನ್ನೊಂದೆಡೆ ಒತ್ತಡದಲ್ಲಿರುವ ಭಾರತ ತಂಡವು ಅಗ್ರ ಬ್ಯಾಟ್ಸ್‌ಮನ್ನರಿಂದ ಉಪಯುಕ್ತ ಕೊಡುಗೆ ನಿರೀಕ್ಷಿಸುತ್ತಿದೆ. ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಗಾಯಾಳಾಗಿದ್ದಾರೆ. ವಿರಾಟ್‌ ಕೊಹ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.ಶ್ರೇಯಸ್‌ ಅಯ್ಯರ್‌ ಒಂದು ಶತಕ, ಒಂದು ಅರ್ಧ ಶತಕ ಗಳಿಸಿ ಮಿಂಚಿದ್ದಾರೆ. ಆದರೆ ಅವರಿಗೆ ಅನುಭವಿ ರಾಸ್‌ ಟೇಲರ್‌ ರೀತಿ ಪಂದ್ಯ ‘ಫಿನಿಷಿಂಗ್‌’ ಮಾಡಲು ಸಾಧ್ಯವಾಗಿಲ್ಲ. ಕೆ.ಎಲ್‌.ರಾಹುಲ್‌ ಕೆಳಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಒಟ್ಟಾರೆ ಭಾರತದ ಬ್ಯಾಟಿಂಗ್‌ ಎದುರಾಳಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿಲ್ಲ.

ಆರಂಭ ಆಟಗಾರರಾದ ಪ್ರಥ್ವಿ ಶಾ ಮತ್ತು ಮಯಂಕ್‌ ಅಗರವಾಲ್‌ ಭಾರತಕ್ಕೆ ನಿರೀಕ್ಷಿತ ರೀತಿಯ ಆರಂಭ ನೀಡುತ್ತಿಲ್ಲ. ಒಟ್ಟಾರೆ, ಕಳೆದ ವರ್ಷದ ಯಶಸ್ವಿ ಆಟಗಾರ ರೋಹಿತ್‌ ಶರ್ಮಾ ಅನುಪಸ್ಥಿತಿ ಹೆಚ್ಚು ಕಾಡುತ್ತಿದೆ.

ADVERTISEMENT

ಕೆಲವೇ ದಿನಗಳ ಹಿಂದೆ ಟಿ–20 ಸರಣಿಯನ್ನು 5–0 ಯಿಂದ ಗೆದ್ದುಕೊಂಡು ಬೀಗಿದ್ದ ಭಾರತ ತಂಡ, ಈಗ ಏಕದಿನ ಸರಣಿ ಮೊದಲೆರಡು ಪಂದ್ಯಗಳಲ್ಲಿ ಸೋತು ಬಾಗಿದೆ. ಕೊನೆಯ ಬಾರಿ, 2019ರ ಆರಂಭದಲ್ಲಿ ಇಲ್ಲಿಗೆ ಪ್ರವಾಸ ಮಾಡಿದ್ದಾಗ ಭಾರತ ಏಕದಿನ ಸರಣಿಯನ್ನು 4–1ರಿಂದ ಸೋತಿತ್ತು. ಆದರೆ ಟಿ–20 ಸರಣಿಯನ್ನು 2–1 ರಿಂದ ಗೆದ್ದುಕೊಂಡಿತ್ತು!

ಕೇನ್‌ ವಿಲಿಯಮ್ಸನ್‌, ಟ್ರೆಂಟ್‌ ಬೌಲ್ಟ್‌, ಲಾರ್ಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ ಗಾಯಾಳುಗಳಾಗಿ ಏಕದಿನ ಸರಣಿಯಲ್ಲಿ ಆಡಲಿರಲಿಲ್ಲ. ಟಿಮ್‌ ಸೌತಿ ಕೂಡ ತಂಡದಲ್ಲಿರಲಿಲ್ಲ. ಲೆಗ್‌ ಸ್ಪಿನ್ನರ್‌ ಈಶ್‌ ಸೋಧಿ ಭಾರತ ‘ಎ’ ತಂಡದ ವಿರುದ್ಧ ಆಡಲು ಲಿಂಕನ್‌ಗೆ ಹೋಗಿದ್ದರು.

ಇಷ್ಟೊಂದು ಸಮಸ್ಯೆಯ ನಡುವೆಯೂ ಆತಿಥೇಯರು ಸರಣಿಯಲ್ಲಿ ಗೆಲುವಿನ ಮುನ್ನಡೆ ಸಾಧಿಸಿದ್ದಾರೆ. ಆಕ್ಲೆಂಡ್‌ನ ಎರಡನೇ ಪಂದ್ಯದಲ್ಲಿ ಹೆಚ್ಚುವರಿ ಆಟಗಾರರಿಲ್ಲದೇ ಅಸಿಸ್ಟೆಂಟ್‌ ಕೋಚ್‌ ಲ್ಯೂಕ್‌ ರಾಂಚಿ ಬದಲಿ ಕ್ಷೇತ್ರರಕ್ಷಕರಾಗಿ ಮೈದಾನಕ್ಕೆ ಇಳಿದಿದ್ದರು. ಟಿಮ್‌ ಸೌಥಿ 10 ಓವರುಗಳನ್ನು ಮಾಡಿ ಪೆವಿಲಿಯನ್‌ಗೆ ಮರಳಿದವರು ಹಿಂತಿರುಗಿರಲಿಲ್ಲ. ಇದರ ಜೊತೆಗೆ ರವೀಂದ್ರ ಜಡೇಜ ಕೊನೆಗಳಿಗೆಯಲ್ಲಿ ಮೂಡಿಸಿದ್ದ ಆತಂಕದ ಕ್ಷಣಗಳನ್ನೂ ಆತಿಥೇಯರು ಯಶಸ್ವಿಯಾಗಿ ನಿಭಾಯಿಸಿದ್ದರು.

ರಾಸ್‌ ಟೇಲರ್‌ ಎರಡೂ ಪಂದ್ಯಗಳಲ್ಲಿ ಅಬ್ಬರಿಸಿರುವುದು ನ್ಯೂಜಿಲೆಂಡ್‌ಗೆ ವರದಾನವಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದಿಂದ ಹೇಳಿಕೊಳ್ಳುವಂಥ ಕೊಡುಗೆ ಬಂದಿಲ್ಲ. ಬೇ ಓವಲ್‌, ವಿಲಿಯಮ್ಸನ್‌ ತವರು ಮೈದಾನ ಆಗಿದ್ದು ಅವರ ಪುನರಾಗಮನ, ಈ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ವಿಲಿಯಮ್ಸನ್‌ ಮೂರನೇ ಟಿ–20 ಪಂದ್ಯದ ವೇಳೆ ಭುಜದ ನೋವಿಗೆ ಗಾಯಕ್ಕೆ ಒಳಗಾಗಿದ್ದರು. ನಂತರ ಅವರು ಆಡಿರಲಿಲ್ಲ.

ಸ್ಯಾಂಟನರ್‌ ಮತ್ತು ಕುಗೆಲಿನ್‌ ಕೂಡ ಚೇತರಿಸಿಕೊಂಡಿದ್ದಾರೆ. ಈಶ್‌ ಸೋಧಿ ನಾಲ್ಕು ದಿನಗಳ ಪಂದ್ಯ ಮುಗಿಸಿ, ವೇಗಿ ಬ್ಲೇರ್ ಟಿಕ್ನರ್‌ ಜೊತೆ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಬೌಲಿಂಗ್‌ ಕೋಚ್‌ ಶೇನ್‌ ಯುರ್ಗೆನ್ಸನ್‌ ತಿಳಿಸಿದ್ದಾರೆ.

ಇದು ಭಾರತಕ್ಕೆ ಪ್ರವಾಸದ ಕೊನೆಯ ಸೀಮಿತ ಓವರುಗಳ ಪಂದ್ಯವಾಗಿದೆ. ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮೊದಲನೆಯದು ಫೆ. 21ರಂದು ವೆಲಿಂಗ್ಟನ್‌ನ ಬೇಸಿನ್‌ ರಿಸರ್ವ್‌ನಲ್ಲಿ ಆರಂಭವಾಗಲಿದೆ.

ತಂಡಗಳು ಇಂತಿವೆ:

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಪ್ರಥ್ವಿ ಶಾ, ಮಯಂಕ್‌ ಅಗರವಾಲ್‌, ಕೆ.ಎಲ್‌.ರಾಹುಲ್ (ವಿಕೆಟ್‌ ಕೀಪರ್‌), ಮನೀಶ್‌ ಪಾಂಡೆ, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಶಾರ್ದೂಲ್‌ ಠಾಕೂರ್‌, ನವದೀಪ್‌ ಸೈನಿ.

ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಲಥಾಮ್‌ (ವಿಕೆಟ್‌ ಕೀಪರ್‌), ಮಾರ್ಟಿನ್‌ ಗಪ್ಟಿಲ್‌, ರಾಸ್‌ ಟೇಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಜಿಮ್ಮಿ ನೀಶಮ್‌, ಸ್ಕಾಟ್‌ ಕುಗೆಲಿನ್‌, ಟಾಮ್‌ ಬ್ಲಂಡೆಲ್‌, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್‌ನರ್‌, ಹಮಿಷ್‌ ಬೆನೆಟ್‌, ಟಿಮ್‌ ಸೌಥಿ, ಕೈಲ್‌ ಜೆಮಿಸನ್‌, ಈಶ್‌ ಸೋಧಿ ಮತ್ತು ಬ್ಲೇರ್ ಟಿಕ್ನರ್‌.‌

ಪಂದ್ಯದ ಆರಂಭ: ಬೆಳಿಗ್ಗೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.