ADVERTISEMENT

ಸಾಮರ್ಥ್ಯ ಸಾಬೀತು ಪಡಿಸಲು ಶಿವಂ ದುಬೆಗೆ ಇನ್ನಷ್ಟು ಅವಕಾಶ ನೀಡಬೇಕು: ಯುವರಾಜ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 13:25 IST
Last Updated 6 ಫೆಬ್ರುವರಿ 2020, 13:25 IST
 ಯುವರಾಜ್‌ ಸಿಂಗ್‌ ಹಾಗೂ ಒಳಚಿತ್ರದಲ್ಲಿ ಶಿವಂ ದುಬೆ
ಯುವರಾಜ್‌ ಸಿಂಗ್‌ ಹಾಗೂ ಒಳಚಿತ್ರದಲ್ಲಿ ಶಿವಂ ದುಬೆ   

ನವದೆಹಲಿ:ಭಾರತ ಕ್ರಿಕೆಟ್‌ ತಂಡದಆಲ್ರೌಂಡರ್‌ ಶಿವಂ ದುಬೆ ಅವರು ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಇನ್ನಷ್ಟು ಅವಕಾಶ ನೀಡಬೇಕು ಎಂದುಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಯ 5ನೇ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಶಿವಂ ದುಬೆ ಒಂದೇ ಓವರ್‌ನಲ್ಲಿ 34 ರನ್ ಬಿಟ್ಟುಕೊಟ್ಟಿದ್ದರು. ಇದು ಟಿ20 ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್‌ ಆಗಿದೆ.ಹೀಗಾಗಿ ಶಿವಂ ದುಬೆ ಸಾಮರ್ಥ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.2007ರ ವಿಶ್ವಕಪ್‌ನಲ್ಲಿ ಯುವರಾಜ್‌ ಸಿಂಗ್‌, ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ಗೆ 36 ರನ್‌ (ಆರು ಸಿಕ್ಸ್‌) ಸಿಡಿಸಿದ್ದರು. ಇದು ಒಂದೇ ಓವರ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್‌ ಆಗಿದೆ.

ಭಾರತ ತಂಡ 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಯುವಿ, ‘ಶಿವಂ ದುಬೆ ಒಳ್ಳೆಯ ಪ್ರತಿಭೆ ಎನಿಸುತ್ತದೆ. ಹಾರ್ದಿಕ್‌ ಪಾಂಡ್ಯ ಈಗೆಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದ ಗುಣಮುಖರಾಗಿ ವೇಗದ ಬೌಲಿಂಗ್‌ ಮಾಡುವುದು ಅಷ್ಟು ಸುಲಭವಲ್ಲ.ಅದರಿಂದ ಹಾರ್ದಿಕ್‌ ಹೇಗೆ ಹೊರಬರಲಿದ್ದಾರೆ ಎಂಬುದು ಗೊತ್ತಿಲ್ಲ’

ADVERTISEMENT

‘ದುಬೆಯತ್ತ ನೋಡುವುದಾದರೆ, ಅವರಿಗೆ ಮತ್ತಷ್ಟು ಸಮಯ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಯಾರುಸ್ಥಿರ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ’ ಎಂದು ತಿಳಿಸಿದ್ದಾರೆ.

ಇದುವರೆಗೆ ಒಟ್ಟು 12 ಟಿ20 ಪಂದ್ಯಗಳನ್ನು ಆಡಿರುವ ದುಬೆ 9 ಇನಿಂಗ್ಸ್‌ಗಳಿಂದ 105 ರನ್‌ ಗಳಿಸಿದ್ದಾರೆ.ಬೌಲಿಂಗ್‌ನಲ್ಲಿ 10.5ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಐದು ವಿಕೆಟ್‌ ಕಬಳಿಸಿದ್ದಾರೆ.‌ ಆಡಿರುವ ಏಕೈಕ ಏಕದಿನ ಪಂದ್ಯದಲ್ಲಿ 9 ರನ್‌ ಗಳಿಸಿ, 8.68 ಸರಾಸರಿಯಲ್ಲಿ 68 ರನ್‌ ನೀಡಿದ್ದಾರೆ.

ಬೆನ್ನೆಲುಬಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಾರ್ದಿಕ್‌ ಪಾಂಡ್ಯ ಸದ್ಯ ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಹಾರ್ದಿಕ್‌ಇದುವರೆಗೆ 11 ಟೆಸ್ಟ್‌, 54 ಏಕದಿನ ಮತ್ತು 40 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್‌ನಲ್ಲಿ532 ರನ್‌ ಹಾಗೂ17 ವಿಕೆಟ್‌, ಏಕದಿನ ಮಾದರಿಯಲ್ಲಿ 957 ರನ್‌ ಹಾಗೂ 54 ವಿಕೆಟ್‌ ಮತ್ತು ಟಿ20ಯಲ್ಲಿ532 ರನ್‌ ಹಾಗೂ38 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.