ADVERTISEMENT

IND vs SA T20I | ಅಕ್ಷರ್ ಅಲಭ್ಯ; ಶಾಬಾಜ್‌ ಸೇರ್ಪಡೆ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ

ಪಿಟಿಐ
Published 16 ಡಿಸೆಂಬರ್ 2025, 0:10 IST
Last Updated 16 ಡಿಸೆಂಬರ್ 2025, 0:10 IST
   

ನವದೆಹಲಿ: ಭಾರತ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಅನಾರೋಗ್ಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಅವರ ಬದಲಿಗೆ ಶಾಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಅಕ್ಷರ್ ಅವರು ಧರ್ಮಶಾಲಾದಲ್ಲಿ ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲೂ ಆಡಿರಲಿಲ್ಲ. ಅವರ ಬದಲು ಕುಲದೀಪ್ ಯಾದವ್ ಅವರು ಆಡುವ 11ರ ತಂಡದಲ್ಲಿ ಅವಕಾಶ ಪಡೆದಿದ್ದರು. ಆ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 2–1 ಮುನ್ನಡೆ ಪಡೆದಿದೆ.

ಸರಣಿಯ ಕೊನೆಯ ಎರಡು ಪಂದ್ಯಗಳು ಲಖನೌ ಮತ್ತು ಅಹಮದಾಬಾದಿನಲ್ಲಿ ಕ್ರಮವಾಗಿ ಬುಧವಾರ ಮತ್ತು ಶುಕ್ರವಾರ ನಡೆಯಲಿವೆ.

ADVERTISEMENT

‘ಟೀಮ್ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಅನಾರೋಗ್ಯದ ಕಾರಣ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆದರೆ ಅವರು ತಂಡದ ಜೊತೆ ಲಖನೌಗೂ ಪಯಣಿಸಲಿದ್ದಾರೆ. ಅಲ್ಲಿ ಅವರ ಆರೋಗ್ಯದ ಬಗ್ಗೆ ಗಮನ ಇಡಲಾಗುವುದು. ಆಯ್ಕೆ ಸಮಿತಿಯು ಅವರ ಬದಲು ಶಾಬಾಜ್ ಅಹ್ಮದ್ ಅವರನ್ನು ಉಳಿದ ಎರಡು ಪಂದ್ಯಗಳಿಗೆ ಸೇರ್ಪಡೆ ಮಾಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

31 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಶಾಬಾಜ್ ಅಹ್ಮದ್ ಅವರು ಎರಡು ಟಿ20 ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿದ್ದು ಒಟ್ಟು ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಇತ್ತೀಚಿನ ರಣಜಿ ಮತ್ತು ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.