ADVERTISEMENT

IND vs SA: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 8:16 IST
Last Updated 9 ಡಿಸೆಂಬರ್ 2025, 8:16 IST
   

ಕಟಕ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯವು ಡಿ.9ರಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–0 ಅಲ್ಲಿ ಸೋತಿದ್ದ ಭಾರತ ತಂಡವು, ಏಕದಿನ ಸರಣಿಯನ್ನು 2–1ರಲ್ಲಿ ಗೆದ್ದುಕೊಂಡಿತ್ತು.

ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ಪೂರ್ವ ಸಿದ್ಧತೆಯಂತಿರುವ ಈ ಸರಣಿಯನ್ನು ಗೆಲ್ಲಲು, ಉಭಯ ತಂಡಗಳು ಕೂಡ ತುಂಬಾ ಉತ್ಸಾಹದಲ್ಲಿವೆ.

ADVERTISEMENT

ಟಿ–20 ಕ್ರಿಕೆಟ್‌ನಲ್ಲಿ ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ತಂಡ 18 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡವು 12 ಪಂದ್ಯಗಳಲ್ಲಿ ಗೆಲುವು ಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.

ಇದರಲ್ಲಿ ಭಾರತವು ತವರು ಮೈದಾನದಲ್ಲಿ 5 ಪಂದ್ಯಗಳನ್ನು ಗೆದ್ದಿದ್ದು, ದಕ್ಷಿಣ ಆಫ್ರಿಕಾದಲ್ಲಿ 9 ಪಂದ್ಯಗಳನ್ನು ಜಯಿಸಿದೆ. ತಟಸ್ಥ ಮೈದಾನದಲ್ಲಿ 4 ಬಾರಿ ಗೆದ್ದಿದೆ.

ದಕ್ಷಿಣ ಆಫ್ರಿಕಾವು ತವರಿನಂಗಳದಲ್ಲಿ 4 ಪಂದ್ಯ ಗೆದ್ದಿದ್ದರೆ, ಭಾರತದಲ್ಲಿ 6 ಪಂದ್ಯ ಜಯಿಸಿದೆ. ತಟಸ್ಥ ಮೈದಾನದಲ್ಲಿ 2 ಪಂದ್ಯದಲ್ಲಿ ಗೆಲುವು ಗಳಿಸಿದೆ.

ಟಿ–20 ಸರಣಿಯಲ್ಲಿ ಮುಖಾಮುಖಿ

ಉಭಯ ತಂಡಗಳ ಮಧ್ಯೆ 7 ಬಾರಿ ಟಿ–20 ಸರಣಿ ನಡೆದಿದ್ದು ಅದರಲ್ಲಿ ಭಾರತವು 3 ಸರಣಿ ಗೆದಿದ್ದರೆ, ದಕ್ಷಿಣ ಆಫ್ರಿಕಾವು 1 ಸರಣಿ ಜಯಿಸಿದೆ. ಇನ್ನೂ 3 ಸರಣಿಗಳು ಡ್ರಾ ಆಗಿವೆ.

ಉಭಯ ತಂಡಗಳ ಮಧ್ಯೆ ಕೊನೆಯ ಬಾರಿ 2024–25ರಲ್ಲಿ ಟಿ–20 ಸರಣಿ ನಡೆದಿತ್ತು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಭಾರತವು 4 ಪಂದ್ಯಗಳ ಸರಣಿಯನ್ನು 3–1ರಲ್ಲಿ ಜಯಿಸಿತ್ತು.

ಅತಿ ಹೆಚ್ಚು ರನ್‌

ಉಭಯ ತಂಡಗಳ ನಡುವಿನ ಟಿ–20 ಪಂದ್ಯಗಳ ಮುಖಾಮುಖಿಯಲ್ಲಿ ಡೇವಿಡ್‌ ಮಿಲ್ಲರ್ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಆಗಿದ್ದಾರೆ. ಅವರು 25 ಪಂದ್ಯಗಳಲ್ಲಿ 524 ರನ್‌ ಬಾರಿಸಿದ್ದಾರೆ.

ಭಾರತದ ಪರ ರೋಹಿತ್‌ ಶರ್ಮಾ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್, 18 ಪಂದ್ಯಗಳಲ್ಲಿ 429 ರನ್‌ ಗಳಿಸಿದ್ದಾರೆ.

ಭಾರತದ ಪರ ಹಾಲಿ ಆಟಗಾರರಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದು, 11 ಪಂದ್ಯದಲ್ಲಿ 372 ರನ್‌ ಹೊಡೆದಿದ್ದಾರೆ.

ಅತಿ ಹೆಚ್ಚು ವಿಕೆಟ್‌

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ–20 ಪಂದ್ಯಗಳಲ್ಲಿ ಭಾರತದ ವೇಗಿ ಅರ್ಷದೀಪ್‌ ಸಿಂಗ್‌, ಅತಿ ಹೆಚ್ಚು ವಿಕೆಟ್‌ ಪಡೆದ ಆಟಗಾರರಾಗಿದ್ದಾರೆ. 10 ಪಂದ್ಯಗಳಲ್ಲಿ 18 ವಿಕೆಟ್‌ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಸ್ವಿನ್ನರ್‌ ಕೇಶವ್‌ ಮಹಾರಾಜ್‌ ಅವರು ಅತಿ ಹೆಚ್ಚು ವಿಕೆಟ್‌ ಕಿತ್ತಿದ್ದು, 15 ಪಂದ್ಯಗಳಲ್ಲಿ 15 ವಿಕೆಟ್‌ ಕಬಳಿಸಿದ್ದಾರೆ.

ಮುಂಬರುವ ಟಿ–20 ವಿಶ್ವಕಪ್‌ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಟೂರ್ನಿ ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.