ADVERTISEMENT

IND vs SL 2ನೇ ಏಕದಿನ ಪಂದ್ಯ: ಭಾರತಕ್ಕೆ 276 ರನ್‌ ಗೆಲುವಿನ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2021, 13:38 IST
Last Updated 20 ಜುಲೈ 2021, 13:38 IST
ವಾಣಿಂದು ಹಸರಂಗ ಅವರ ವಿಕೆಟ್ ಪಡೆದು ಸಹ ಆಟಗಾರರ ಜತೆ ಸಂಭ್ರಮಿಸುತ್ತಿರುವ ದೀಪಕ್ ಚಾಹರ್ – ರಾಯಿಟರ್ಸ್ ಚಿತ್ರ
ವಾಣಿಂದು ಹಸರಂಗ ಅವರ ವಿಕೆಟ್ ಪಡೆದು ಸಹ ಆಟಗಾರರ ಜತೆ ಸಂಭ್ರಮಿಸುತ್ತಿರುವ ದೀಪಕ್ ಚಾಹರ್ – ರಾಯಿಟರ್ಸ್ ಚಿತ್ರ   

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತು. ಇದರೊಂದಿಗೆ ಭಾರತಕ್ಕೆ 276 ರನ್‌ಗಳ ಗೆಲುವಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡಕ್ಕೆ ಅವಿಷ್ಕಾ ಫರ್ನಾಂಡೊ (50) ಮತ್ತು ಮಿನೊದ ಭಾನುಕಾ (36) ಉತ್ತಮ ಆರಂಭ ಒದಗಿಸಿದರು. ಈ ಜೋಡಿಯು 13.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 77 ರನ್‌ ಪೇರಿಸಿ ತಂಡವು ಬೃಹತ್ ಮೊತ್ತ ಪೇರಿಸುವ ಸುಳಿವು ನೀಡಿತು. ಆದರೆ, 14ನೇ ಓವರ್‌ನಲ್ಲಿ ಮಿನೊದ ಭಾನುಕಾ ಮತ್ತು ಒನ್‌ಡೌನ್ ಆಟಗಾರ ಭಾನುಕಾ ರಾಜಪಕ್ಸ ಅವರನ್ನು ಔಟ್ ಮಾಡಿದ ಟೀಮ್ ಇಂಡಿಯಾ ಬೌಲರ್ ಯಜುವೇಂದ್ರ ಚಾಹಲ್ ಶ್ರೀಲಂಕಾದ ರನ್ ಓಟಕ್ಕೆ ಕಡಿವಾಣ ಹಾಕಿದರು.

ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲೆಂಕಾ ಅವರ ಆಕರ್ಷಕ ಅರ್ಧ ಶತಕದ (65) ನೆರವಿನಿಂದ ಶ್ರೀಲಂಕಾ ತಂಡವು ಮತ್ತೆ ಚೇತರಿಸಿಕೊಂಡಿತು. ಚಮಿಕಾ ಕರುಣಾರತ್ನೆ ವೇಗದ 44 ರನ್‌ ಗಳಿಸಿ ಅಸಲೆಂಕಾ ಅವರಿಗೆ ಸಾಥ್ ನೀಡಿದರು.

ಭಾರತ ಪರ ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ 2 ವಿಕೆಟ್ ಪಡೆದರು. ಲಕ್ಷನ್ ಸಂದಕನ್ ಅವರನ್ನು ಇಶಾನ್‌ ಕಿಶನ್ ಅವರು ರನೌಟ್ ಮಾಡಿದರು.

ಪೃಥ್ವಿ ಶಾ ಅವರ ಉತ್ತಮ ಆರಂಭ, ಧವನ್ ಮತ್ತು ಇಶಾನ್ ಕಿಶನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಭಾನುವಾರ ಭಾರತ ಸುಲಭ ಗೆಲುವು ಸಾಧಿಸಿತ್ತು. ಶ್ರೀಲಂಕಾ ಏಳು ವಿಕೆಟ್‌ಗಳಿಂದ ಮಣಿದಿತ್ತು. ಈ ಮೂಲಕ ಭಾರತವು ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿ ಉದಾನಾ ಬದಲಿಗೆ ಕಸುನ್ ರಜಿತಾ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.