ADVERTISEMENT

IND vs SL: ದಾಖಲೆ 'ಶಿಖರ' ಏರಿದ ಧವನ್, ಕಿಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2021, 3:33 IST
Last Updated 19 ಜುಲೈ 2021, 3:33 IST
ಶಿಖರ್ ಧವನ್ ಹಾಗೂ ಇಶಾನ್ ಕಿಶನ್
ಶಿಖರ್ ಧವನ್ ಹಾಗೂ ಇಶಾನ್ ಕಿಶನ್   

ಕೊಲಂಬೊ: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,000 ರನ್‌ಗಳ ಮೈಲಿಗಲ್ಲು ಕ್ರಮಿಸಿದ ಭಾರತ ಕ್ರಿಕೆಟ್ ತಂಡದ 10ನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಶಿಖರ್ ಧವನ್ ಪಾತ್ರರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಧವನ್ ಮಹತ್ವದ ಸಾಧನೆ ಮಾಡಿದ್ದಾರೆ. ಲಂಕಾ ವಿರುದ್ಧ ಏಳು ವಿಕೆಟ್ ಅಂತರದ ಗೆಲುವನ್ನು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಈ ಪಂದ್ಯದ ಪ್ರಮುಖ ಅಂಕಿಅಂಶ ಇಲ್ಲಿದೆ.

ADVERTISEMENT

ಧವನ್ ದಾಖಲೆ...
ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಧವನ್, 86 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಏಕದಿನದಲ್ಲಿ 6,000 ರನ್ ಗಳಿಸಿದ ಭಾರತದ 10ನೇ ಬ್ಯಾಟ್ಸ್‌ಮನ್ ಎಂದೆನಿಸಿದ್ದಾರೆ.

140ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವ ಧವನ್, ಅತಿ ವೇಗವಾಗಿ 6,000 ರನ್‌ಗಳ ಮೈಲಿಗಲ್ಲು ತಲುಪಿದ ನಾಲ್ಕನೇ ಆಟಗಾರರೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ (123), ಭಾರತದ ವಿರಾಟ್ ಕೊಹ್ಲಿ (136) ಹಾಗೂ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (139) ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಭಾರತದ ಪರ ಏಕದಿನದಲ್ಲಿ 6,000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಂತಿದೆ:
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್, ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್.

ಆಕರ್ಷಕ ಫಿಫ್ಟಿ ಬಾರಿಸುವ ಮೂಲಕ ಧವನ್ ಈ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಅಲ್ಲದೆ ಕಪ್ತಾನಗಿರಿಯ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದರೊಂದಿಗೆ ಮಾಜಿ ದಿಗ್ಗಜರಾದ ಅಜಿತ್ ವಾಡೇಕರ್, ರವಿಶಾಸ್ತ್ರಿ, ಸಚಿನ್ ತೆಂಡೂಲ್ಕರ್ ಹಾಗೂ ಅಜೇಯ್ ಜಡೇಜ ಸಾಲಿಗೆ ಸೇರಿದ್ದಾರೆ.

ಇದೇ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲನ್ನು ಕ್ರಮಿಸಿದ್ದಾರೆ.

ಇಶಾನ್ ಕಿಶನ್ ದಾಖಲೆ:
ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ (59) ಸಿಡಿಸಿರುವ ಯುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ದಾಖಲೆ ಬರೆದಿದ್ದಾರೆ.

ಪದಾರ್ಪಣೆಯ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂದೆನಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20ಪಂದ್ಯದಲ್ಲೂ ಇಶಾನ್ ಅರ್ಧಶತಕ ಬಾರಿಸಿದ್ದರು.

ಪದಾರ್ಪಣೆಯ ಏಕದಿನ ಪಂದ್ಯದಲ್ಲಿ ಎರಡನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಹಿರಿಮೆಗೂ ಇಶಾನ್ ಪಾತ್ರರಾಗಿದ್ದಾರೆ. ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದವರೇ ಆದ ಕೃಣಾಲ್ ಪಾಂಡ್ಯ 2021 ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ ಫಿಫ್ಟಿ ಗಳಿಸಿದ್ದರು.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ ಇಶಾನ್ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಈ ಹಿಂದೆ ಟ್ವೆಂಟಿ-20 ಪದಾರ್ಪಣಾ ಪಂದ್ಯದಲ್ಲಿ ಇಶಾನ್, ಚೊಚ್ಚಲ ಎಸೆತದಲ್ಲಿ ಬೌಂಡರಿ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.