ADVERTISEMENT

IND vs WI 1st Test | ಅಶ್ವಿನ್ ಕೈಚಳಕ; ಭಾರತಕ್ಕೆ ಇನಿಂಗ್ಸ್ ಹಾಗೂ 141 ರನ್ ಅಂತರದ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2023, 2:31 IST
Last Updated 15 ಜುಲೈ 2023, 2:31 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಆರ್‌.ಅಶ್ವಿನ್‌
ವಿಕೆಟ್‌ ಪಡೆದ ಸಂಭ್ರಮದಲ್ಲಿ ಆರ್‌.ಅಶ್ವಿನ್‌   ಚಿತ್ರಕೃಪೆ: Twitter / @BCCI

ರೊಸೆಯು, ಡಾಮಿನಿಕಾ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ ತಂಡವು ಇನಿಂಗ್ಸ್ ಹಾಗೂ 141 ರನ್ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.

ಡಾಮಿನಿಕಾದಲ್ಲಿ ಬುಧವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಂಡೀಸ್ ಪಡೆ 150 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತದೆದುರು ಉತ್ತಮ ಬ್ಯಾಟಿಂಗ್ ನಡೆಸಿದ ಭಾರತ, 5 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಪದಾರ್ಪಣೆ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ (171), ನಾಯಕ ರೋಹಿತ್ ಶರ್ಮಾ (103) ಶತಕ ಹಾಗೂ ಅನುಭವಿ ವಿರಾಟ್‌ ಕೊಹ್ಲಿ 76 ರನ್‌ ಕಲೆಹಾಕಿ ಟೀಂ ಇಂಡಿಯಾ ಇನಿಂಗ್ಸ್‌ಗೆ ಬಲ ತುಂಬಿದ್ದರು.

ADVERTISEMENT

ಆರ್‌.ಅಶ್ವಿನ್‌ ಕೈಚಳಕ
270 ರನ್ ಹಿನ್ನಡೆಯೊಂದಿಗೆ ಕಣಕ್ಕಿಳಿದ ವಿಂಡೀಸ್ ತಂಡದ ಬ್ಯಾಟಿಂಗ್‌, ಆರ್‌.ಅಶ್ವಿನ್‌ ಕೈಚಳಕದ ಎದುರು ಎರಡನೇ ಇನಿಂಗ್ಸ್‌ನಲ್ಲೂ ಸುಧಾರಿಸಲಿಲ್ಲ. ಸ್ಪಿನ್‌ ಬಲೆಗೆ ಬಿದ್ದ ಆತಿಥೇಯ ತಂಡದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರು.

ಅಲಿಕ್ ಅತಾಂಜೆ 27 ರನ್‌ ಗಳಿಸಿದ್ದೇ, ಈ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತು. ಹೀಗಾಗಿ, ವಿಂಡೀಸ್‌ ಬಳಗ 130 ರನ್ ಗಳಿಗೆ ಸರ್ವ ಪತನ ಕಂಡು, ಹೀನಾಯ ಸೋಲೊಪ್ಪಿಕೊಳ್ಳಬೇಕಾಯಿತು.

ಭಾರತ ಪರ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದ ಅಶ್ವಿನ್, ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸಿದರು.

ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಎನಿಸಿಕೊಂಡರು.

ಎರಡನೇ ಪಂದ್ಯ ಟ್ರಿನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ನಲ್ಲಿ ಜುಲೈ 20ರಿಂದ ಜುಲೈ 24ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.