ಕೆ.ಎಲ್.ರಾಹುಲ್
(ಚಿತ್ರ ಕೃಪೆ: ಸ್ಟಾರ್ ಸ್ಪೋರ್ಟ್ಸ್)
ನಾರ್ಥಂಪ್ಟನ್: ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡದ ಆರಂಭಿಕ ಬ್ಯಾಟರ್, ಕನ್ನಡಿಗ ಕೆ.ಎಲ್. ರಾಹುಲ್ ಶತಕದ ಸಾಧನೆ ಮಾಡಿದ್ದಾರೆ.
ಆ ಮೂಲಕ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಪೂರ್ವ ತಯಾರಿಯನ್ನು ನಡೆಸಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತ 40 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ (17) ಹಾಗೂ ನಾಯಕ ಅಭಿಮನ್ಯು ಈಶ್ವರನ್ (11) ವಿಕೆಟ್‌ಗಳನ್ನು ಕಳೆದುಕೊಂಡಿತು.
ಈ ಹಂತದಲ್ಲಿ ಮಗದೊಬ್ಬ ಕನ್ನಡಿಗ ಕರುಣ್ ನಾಯರ್ ಜೊತೆಗೂಡಿದ ರಾಹುಲ್ ತಂಡವನ್ನು ಮುನ್ನಡೆಸಿದರು. ಕರುಣ್ 40 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಬಳಿಕ ಕ್ರೀಸಿಗಿಳಿದ ಧ್ರುವ್ ಜುರೇಲ್ ಸಹ ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು. ಅತ್ತ ಅಮೋಘ ಇನಿಂಗ್ಸ್ ಕಟ್ಟಿದ ರಾಹುಲ್, ಆರಂಭಿಕನಾಗಿ ಶತಕ ಗಳಿಸಿ ಮಿಂಚಿದರು.
ರಾಹುಲ್ ಅಜೇಯ ಶತಕವು 150 ಎಸೆತಗಳಲ್ಲಿ ದಾಖಲಾಯಿತು. ಜುರೇಲ್ ಸಹ ಅಜೇಯ ಅರ್ಧಶತಕ ಗಳಿಸಿ ಕ್ರೀಸಿನಲ್ಲಿದ್ದಾರೆ.
ತಾಜಾ ವರದಿಯ ವೇಳೆಗೆ ಮೊದಲ ದಿನದಾಟದಲ್ಲಿ ಭಾರತ 55 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.