ಕರುಣ್ ನಾಯರ್
ನವದೆಹಲಿ: ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಧ್ರುವ್ ಜುರೇಲ್ ಸೇರಿದಂತೆ ಭಾರತ ಟೆಸ್ಟ್ ತಂಡದ ಕೆಲವು ಕಾಯಂ ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಕನ್ನಡಿಗ ಕರುಣ್ ನಾಯರ್ ಸಹ ಅವಕಾಶ ಪಡೆದಿದ್ದಾರೆ.
ಈ ತಂಡವು, ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪಂದ್ಯಗಳ ಸರಣಿಯನ್ನು ಆಡಲಿದೆ. ನಾಲ್ಕು ದಿನಗಳ ಅವಧಿಯ ಮೊದಲ ಪಂದ್ಯ ಮೇ 30ರಂದು ಕ್ಯಾಂಟರ್‌ಬರಿಯಲ್ಲಿ ಆರಂಭವಾಗಲಿದೆ.
ರೋಹಿತ್ ಶರ್ಮಾ ನಿವೃತ್ತರಾಗಿರುವ ಕಾರಣ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸುವರೆಂದು ನಿರೀಕ್ಷಿ ಸಲಾಗಿರುವ ಶುಭಮನ್ ಗಿಲ್ ಮತ್ತು ಬಿ.ಸಾಯಿ ಸುದರ್ಶನ್ ಅವರು ಎರಡನೇ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಎರಡನೇ ಪಂದ್ಯ ಜೂನ್ 6 ರಿಂದ 9ರವರೆಗೆ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳನ್ನು ಆಡಲಿರುವ ಭಾರತ ತಂಡದ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ‘ಎ’ ತಂಡದ ಸರಣಿ ನಡೆಯುತ್ತಿದೆ. ‘ಎ’ ತಂಡವು, ಜೂನ್ 13 ರಿಂದ 16ರವರೆಗೆ ಸೀನಿಯರ್ ತಂಡದ ಜೊತೆಗೂಡಿ ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಭಾರತ ತಂಡದ ಮೊದಲ ಟೆಸ್ಟ್ ಜೂನ್ 20ರಿಂದ ಲೀಡ್ಸ್‌ನಲ್ಲಿ ನಡೆಯಲಿದೆ.
ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಪರ ರನ್‌ಹೊಳೆ ಹರಿಸಿದ್ದ ಕರುಣ್ ನಾಯರ್ ಅವರು ಎಂಟು ವರ್ಷಗಳ ನಂತರ ರಾಷ್ಟ್ರೀಯ ತಂಡದ ಸೇರ್ಪಡೆಗೆ ಹತ್ತಿರವಾಗಿದ್ದಾರೆ. ರಣಜಿ ಚಾಂಪಿಯನ್ ವಿದರ್ಭ ತಂಡದ ಪರ ರಣಜಿಯಲ್ಲಿ 69 ವಿಕೆಟ್ ಪಡೆದಿದ್ದ ಎಡಗೈ ಸ್ಪಿನ್ನರ್ ಹರ್ಷ ದುಬೆ ಅವರೂ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಇಶಾನ್ ಕಿಶನ್ ಅವರು ಈ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್‌ಗೆ ನಿವೃತ್ತಿ ಪ್ರಕಟಿಸಿದ ಕಾರಣ, ಭಾರತ ತಂಡ ಈಗ ಬದಲಾವಣೆಯ ಪರ್ವದಲ್ಲಿದೆ.
ಗಿಲ್ ಈ ಹಿಂದೆ ಇಂಗ್ಲೆಂಡ್‌ನಲ್ಲಿ ಅಂಥ ಯಶಸನ್ನು ಕಂಡಿರಲಿಲ್ಲ. ಹೀಗಾಗಿ ಅವರು ಎರಡನೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡುವ ಅವಕಾಶ ಪಡೆದಿದ್ದರೆ. ಗುಜರಾತ್ ಟೈಟನ್ಸ್‌ನಲ್ಲಿ ಅವರ ಜೊತೆಗಾರ ಸಾಯಿ ಸುದರ್ಶನ್ ಅವರೂ ಟೆಸ್ಟ್ ತಂಡ ಸೇರುವ ನಿರೀಕ್ಷೆಯಿದೆ.
ಭಾರತ ‘ಎ’ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೇಲ್ (ಉಪ ನಾಯಕ/ ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ತನುಷ್ ಕೋಟ್ಯಾನ್, ಮುಕೇಶ್ ಕುಮಾರ್, ಆಕಾಶ್ ದೀಪ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್, ಋತುರಾಜ್ ಗಾಯಕವಾಡ್, ಸರ್ಫರಾಜ್ ಖಾನ್, ತುಷಾರ ದೇಶಪಾಂಡೆ ಮತ್ತು
ಹರ್ಷ್ ದುಬೆ.
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ಎರಡನೆ ಪಂದ್ಯಕ್ಕೆ ಮೊದಲು ತಂಡ ಸೇರಿಕೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.