ADVERTISEMENT

ಮಹಿಳಾ ಏಕದಿನ ಸರಣಿ: ಭಾರತ ತಂಡಕ್ಕೆ ಕ್ಲೀನ್‌ಸ್ವೀಪ್‌ ಗುರಿ

ಅಂತಿಮ ಪಂದ್ಯ ಇಂದು

ಪಿಟಿಐ
Published 15 ಜನವರಿ 2025, 0:45 IST
Last Updated 15 ಜನವರಿ 2025, 0:45 IST
ಪ್ರತಿಕಾ ರಾವಲ್
ಪ್ರತಿಕಾ ರಾವಲ್   

ರಾಜಕೋಟ್‌: ಹಿಂದಿನ ಎರಡು ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಸಾಧಿಸಿರುವ ಭಾರತ ತಂಡವು ಬುಧವಾರ ಐರ್ಲೆಂಡ್‌ ವಿರುದ್ಧ ಇಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವನ್ನೂ ಗೆದ್ದು ಕ್ಲೀನ್‌ಸ್ವೀಪ್ ಸಾಧಿಸುವ ಗುರಿಯಲ್ಲಿದೆ.

‌ಇದೇ ತಾಣದಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಆತಿಥೇಯ ತಂಡದ ಬ್ಯಾಟರ್‌ಗಳು ಅಮೋಘವಾಗಿ ಆಡಿದ್ದು ಅದನ್ನು ಮುಂದುವರಿಸುವ ತವಕದಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳನ್ನು ಹೊಡೆದಿರುವ ಪ್ರತಿಕಾ ರಾವಲ್ ಮೊದಲ ಅರ್ಧ ಶತಕವನ್ನು ಶತಕವಾಗಿ ಪರಿವರ್ತಿಸಲು ಕಾತರರಾಗಿದ್ದಾರೆ.

ಪ್ರತಿಕಾ, ಈ ಸರಣಿಯಲ್ಲಿ ನಾಯಕಿ ಸ್ಮೃತಿ ಮಂದಾನ ಜೊತೆ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಇವರಿಬ್ಬರು 156 ರನ್‌ಗಳ ಜೊತೆಯಾಟವಾಡಿದ್ದರು. ಐದು ಇನಿಂಗ್ಸ್‌ಗಳಲ್ಲಿ ಇದು ಇವರಿಬ್ಬರ ನಡುವಣ ಮೂರನೇ ಶತಕ ಜೊತೆಯಾಟವೆನಿಸಿತ್ತು.

ADVERTISEMENT

ಎಡಗೈ ಆಟಗಾರ್ತಿ ಮಂದಾನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಉತ್ತಮ ಲಯದಲ್ಲಿದ್ದು, ಎಲ್ಲ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭದಲ್ಲಿ ಪರದಾಡಿದ್ದ ಹರ್ಲೀನ್ ಡಿಯೋಲ್ ನಂತರ ಲಯ ಕಂಡುಕೊಂಡಿದ್ದು, ಈ ಹಿಂದಿನ ಪಂದ್ಯದಲ್ಲಿ ಮಹತ್ವದ 89 ರನ್ ಗಳಿಸಿದ್ದರು.

ಜೆಮಿಮಾ ರಾಡ್ರಿಗಸ್‌ ಸಹನೆಯ ಜೊತೆ ಏಕಾಗ್ರತೆಯನ್ನೂ ಮಿಳಿತಗೊಳಿಸಿ ಸರಣಿಯ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಭಾರತ ಆ ಪಂದ್ಯದಲ್ಲಿ ಏಕದಿನ ಪಂದ್ಯಗಳಲ್ಲಿ ದಾಖಲೆಯ 5 ವಿಕೆಟ್‌ಗೆ 370 ರನ್ ಪೇರಿಸಿತ್ತು. ನಾಯಕಿಯಾಗಿದ್ದ ಹರ್ಮನ್‌ಪ್ರೀತ್ ಕೌರ್ ಅವರ ಗೈರಿನಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಜೆಮಿಮಾ ಪ್ರಬುದ್ಧ ಆಟವಾಡಿದ್ದಾರೆ. ಒಂದು ಜೀವದಾನ ಪಡೆದಿದ್ದರೂ ಅವರ ಆಟ ಸೊಗಸಾಗಿತ್ತು.

‘ಇದು ಹೆಚ್ಚುವರಿಯಾಗಿ ಬಂದ ಹೊಣೆ. ಆರಂಭದಲ್ಲಿ ಸಾಕಷ್ಟು ಸಹನೆಯಿಂದ ಆಡಿದ್ದೆ. ಕುದುರಿಕೊಂಡು ಆಡಿದ್ದು ಆಡಿದ್ದು ಫಲ ನೀಡಿತು. ನಂತರ ರನ್‌ಗಳು ಹರಿದುಬಂದವು’ ಎಂದು ಜೆಮಿಮಾ ಹೇಳಿದರು.

ಅನುಭವಿ ಬ್ಯಾಟರ್‌ ತೇಜಲ್ ಹಸಬ್ನಿಸ್ ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕ ದಾಖಲಿಸಿದ್ದರು.

ಬೀಸುಹೊಡೆತಗಳ ಆಟಗಾರ್ತಿ ಶಫಾಲಿ ಮತ್ತು ಕೌರ್‌ ಅಂಥ ಅನುಭವಿಗಳ ಅನುಪಸ್ಥಿತಿಯಲ್ಲಿ ಪ್ರತಿಕಾ ಅಂಥ ಯುವ ಆಟಗಾರ್ತಿಯರು ದೊರೆತ ಅವಕಾಶದಲ್ಲಿ ಮಿಂಚಿದ್ದಾರೆ.

ಆದರೆ ಬೌಲಿಂಗ್ ವಿಭಾಗದಲ್ಲಿ ಇದೇ ಮಾತು ಹೇಳುವತಿಲ್ಲ. ಐರ್ಲೆಂಡ್‌ ತಂಡದ ವಿಕೆಟ್‌ಗಳನ್ನು ನಿಯಮಿತವಾಗಿ ಪಡೆಯುವಲ್ಲಿ ಬೌಲರ್‌ಗಳು ಯಶಸ್ವಿಯಾಗಲಿಲ್ಲ. 371 ರನ್‌ಗಳ ಬೆಂಬತ್ತಿದ ಐರ್ಲೆಂಡ್ 7 ವಿಕೆಟ್‌ಗೆ 254 ರನ್ ಗಳಿಸಿದ್ದು ಆಲೌಟ್‌ ಆಗಲಿಲ್ಲ. ಭಾರತ ತಂಡಕ್ಕೆ ವೇಗದ ಬೌಲರ್ ರೇಣುಕಾ ಸಿಂಗ್ ಮತ್ತು ಅನುಭವಿ ಪೂಜಾ ವಸ್ತ್ರಾಕರ್ ಅನುಪಸ್ಥಿತಿ ಕಾಡುತ್ತಿದೆ.

ಎರಡನೇ ಪಂದ್ಯ ದೀಪ್ತಿ ಶರ್ಮಾ ಅವರಿಗೆ ನೂರನೇ ಪಂದ್ಯವಾಗಿದ್ದು, ಅವರು ಭಾರತದ ಕಡೆ ಯಶಸ್ವಿ ಬೌಲರ್ ಎನಿಸಿದ್ದಾರೆ. 19.50 ಸರಾಸರಿಯಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಿಯಾ ಮಿಶ್ರಾ, ಸಯಾಲಿ ಸಾತ್ಗರೆ, ತಿತಾಸ್ ಸಾಧು ಪರಿಣಾಮಕಾರಿಯಾಗಿಲ್ಲ.

ಪ್ರವಾಸಿ ತಂಡವು, ನಾಯಕಿ ಗ್ಯಾಬಿ ಲೂಯಿಸ್‌, ಕ್ರಿಸ್ಟಿನಾ ಕೌಲ್ಟರ್–ರೀಲಿ ಮತ್ತು ಲಿಯಾ ಪೌಲ್‌ ಅವರಿಂದ ಮತ್ತೆ ಉತ್ತಮ ಆಟ ನಿರೀಕ್ಷಿಸುತ್ತಿದೆ. ಈ ಮೂವರೂ ಸರಣಿಯಲ್ಲಿ ಒಂದೊಂದು ಅರ್ಧ ಶತಕ ದಾಖಲಿಸಿದ್ದಾರೆ.

ಆದರೆ ಐರ್ಲೆಂಡ್ ಕ್ಷೇತ್ರರಕ್ಷಣೆ ತಂಡಕ್ಕೆ ದುಬಾರಿಯಾಗಿದೆ. ಕಳಪೆ ಫೀಲ್ಡಿಂಗ್‌ನಿಂದ ಸಾಕಷ್ಟು ರನ್‌ಗಳು ಸೋರಿಹೋಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.