ADVERTISEMENT

ಆಸ್ಟ್ರೇಲಿಯಾ ಎದುರಿನ ಟೆಸ್ಟ್: ವರ್ಷಾಂತ್ಯದಲ್ಲಿ ಭಾರತಕ್ಕೆ ಗೆಲುವಿನ ಹರ್ಷ

ಕೊಹ್ಲಿ ಪಡೆಯ ಕೈ ತಪ್ಪದು ಟ್ರೋಫಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:10 IST
Last Updated 30 ಡಿಸೆಂಬರ್ 2018, 20:10 IST
ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಉರುಳಿಸಿದ ಇಶಾಂತ್ ಶರ್ಮಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಪಿ ಚಿತ್ರ
ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಉರುಳಿಸಿದ ಇಶಾಂತ್ ಶರ್ಮಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಪಿ ಚಿತ್ರ   

ಮೆಲ್ಬರ್ನ್‌: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಗಳಿಸುವುದರೊಂದಿಗೆ ಭಾರತ ಕ್ರಿಕೆಟ್ ತಂಡ ಬಾರ್ಡರ್ ಗಾವಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ 137 ರನ್‌ಗಳಿಂದ ಗೆದ್ದಿತು. ಕೊನೆಯ ಪಂದ್ಯ ಸೋತರೂ ಸರಣಿ ಸಮ ಆಗುವುದರಿಂದ ಟ್ರೋಫಿ ಭಾರತ ತಂಡದ ಕೈತಪ್ಪುವುದಿಲ್ಲ. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತದ ಅಗ್ರ ಸ್ಥಾನಕ್ಕೂ ಕುತ್ತು ಬರುವುದಿಲ್ಲ.

2018–19ನೇ ಕ್ರಿಕೆಟ್ ಋತುವಿನಲ್ಲಿ ಈ ವರೆಗೆ ಭಾರತ ಒಟ್ಟು 38 ಪಂದ್ಯಗಳನ್ನು ಆಡಿದ್ದು 116 ರೇಟಿಂಗ್‌ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ರುವ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಕ್ರಮವಾಗಿ 108, 106 ಮತ್ತು 105 ಪಾಯಿಂಟ್‌ಗಳನ್ನು ಹೊಂದಿವೆ.

ADVERTISEMENT

ಈ ತಂಡಗಳು ಕ್ರಮವಾಗಿ 49, 35 ಮತ್ತು 27 ಪಂದ್ಯಗಳನ್ನು ಆಡಿವೆ. ಭಾರತ ಈ ಋತುವಿನಲ್ಲಿ ಇನ್ನೂ ಆರು ಸರಣಿಗಳಲ್ಲಿ ಪಾಲ್ಗೊಳ್ಳ ಲಿದ್ದು ಒಟ್ಟು 15 ಪಂದ್ಯಗಳನ್ನು ಆಡಲಿದೆ.

ಮೊದಲು ಮಳೆ; ನಂತರ ಸಂಭ್ರಮದ ಹೊಳೆ: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ 399 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಆಟದ ಮುಕ್ತಾಯದ ವೇಳೆ ಎಂಟು ವಿಕೆಟ್ ಕಳೆದುಕೊಂಡು 106 ರನ್‌ ಗಳಿಸಿತ್ತು.

ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ಸುರಿದ ಅನಿರೀಕ್ಷಿತ ಮಳೆ, ವಿರಾಟ್ ಕೊಹ್ಲಿ ಬಳಗದಲ್ಲಿ ಆತಂಕ ಸೃಷ್ಟಿಸಿತು. ಮೊದಲ ಅವಧಿಯ ಪಂದ್ಯ ಪೂರ್ತಿ ಮಳೆಗೆ ಆಹುತಿಯಾಯಿತು. ಆದರೆ ದಿನದಾಟ ಆರಂಭಗೊಂಡ ನಂತರ ಕೇವಲ 27 ಎಸೆತಗಳಲ್ಲಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಬಿತ್ತು; ಭಾರತ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಸರಣಿಯಲ್ಲಿ ಭಾರತ 2–1ರ ಮುನ್ನಡೆ ಸಾಧಿಸಿತು.

ನಾಲ್ಕನೇ ದಿನ ಅರ್ಧ ಶತಕ ಗಳಿಸಿ ಅಜೇಯರಾಗಿದ್ದ ಪ್ಯಾಟ್ ಕಮಿನ್ಸ್‌ ಭಾನುವಾರ ಮೊದಲ ಬಲಿಯಾದರು. ಜಸ್‌ಪ್ರೀತ್ ಬೂಮ್ರಾ ಎಸೆತದಲ್ಲಿ ಕಮಿನ್ಸ್‌, ಸ್ಲಿಪ್‌ನಲ್ಲಿದ್ದ ಚೇತೇಶ್ವರ ಪೂಜಾರಗೆ ಕ್ಯಾಚ್ ನೀಡಿದರು. ಇದು ಪಂದ್ಯದಲ್ಲಿ ಬೂಮ್ರಾ ಅವರ ಒಂಬತ್ತನೇ ವಿಕೆಟ್‌ ಆಗಿತ್ತು. ನಂತರದ ಓವರ್‌ನಲ್ಲಿ ಇಶಾಂತ್ ಶರ್ಮಾ ಅವರ ಎಸೆತವನ್ನು ನೇಥನ್‌ ಲಯನ್‌ ಹುಕ್ ಮಾಡಲು ಪ್ರಯತ್ನಿಸಿದರು. ಬ್ಯಾಟಿನ ಅಂಚಿಗೆ ಬಡಿದ ಚೆಂಡು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಮುಷ್ಟಿ ಸೇರುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಹೋರಾಟ ಕೊನೆಗೊಂಡಿತು.

ಈ ಜಯದೊಂದಿಗೆ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಯಿತು. ಇಲ್ಲಿಯ ವರೆಗೆ ಈ ದಾಖಲೆ ಸೌರವ್ ಗಂಗೂಲಿ ಅವರ ಹೆಸರಿನಲ್ಲಿತ್ತು.

ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ಸಾಧ್ಯತೆ
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ನಾಲ್ಕನೇ ಟೆಸ್ಟ್ ನಂತರ ತಂಡದ ಆಡಳಿತ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಲ್ಲಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಕಡಿಮೆ.

ಮೂರನೇ ಪಂದ್ಯದಲ್ಲಿ ಎದುರಾಳಿ ತಂಡದ ಪನತಕ್ಕೆ ಮುಖ್ಯ ಕಾರಣರಾದ ಬೂಮ್ರಾ ಈ ವರ್ಷ ಈಗಾಗಲೇ 48 ವಿಕೆಟ್ ಬಗಲಿಗೆ ಹಾಕಿಕೊಂಡಿದ್ದಾರೆ. ಬೂಮ್ರಾ ಒಟ್ಟು ಒಂಬತ್ತು ಟೆಸ್ಟ್‌ಗಳಲ್ಲಿ 379.4 ಓವರ್‌ ಬೌಲಿಂಗ್ ಮಾಡಿದ್ದಾರೆ. ಶಮಿ ಮೊಹಮ್ಮದ್ ಶಮಿ 383.5 ಓವರ್ ಮಾಡಿದ್ದಾರೆ. ಆದರೆ ಅವರು 12 ಪಂದ್ಯಗಳನ್ನು ಆಡಿದ್ದಾರೆ. ಇಶಾಂತ್ ಶರ್ಮಾ 335 ಓವರ್‌ ಬೌಲಿಂಗ್ ಮಾಡಿದ್ದು ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅತ್ಯಧಿಕ 386 ಓವರ್‌ ದಾಳಿ ನಡೆಸಿದ್ದಾರೆ.

ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಬೂಮ್ರಾ ಅವರ ಸಾಮರ್ಥ್ಯದ ಲಾಭ ಪಡೆದುಕೊಳ್ಳಬೇಕಾದರೆ ಅದಕ್ಕೂ ಮೊದಲು ಅವರಿಗೆ ವಿಶ್ರಾಂತಿ ನೀಡಬೇಕು ಎಂಬುದು ತಂಡದ ಆಡಳಿತ ಹಾಗೂ ಆಯ್ಕೆ ಸಮಿತಿಯ ಆಶಯ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

ಕೊನೆಯ ಪಂದ್ಯದಲ್ಲಿ ಮಾರ್ನಸ್‌ಗೆ ಅವಕಾಶ

ಜನವರಿ ಮೂರರಂದು ಆರಂಭವಾಗಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಲೆಗ್ ಸ್ಪಿನ್ನರ್‌, ಆಲ್‌ರೌಂಡರ್‌ ಮಾರ್ನಸ್ ಲಬುಚಾನೆ ಅವರಿಗೆ ಅಕವಾಶ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ನಿರ್ಧರಿಸಿದೆ.

ಎರಡನೇ ಪಂದ್ಯದಲ್ಲಿ ಗೆದ್ದ ನಂತರ ಕ್ರಿಕೆಟ್‌ ಆಸ್ಟ್ರೇಲಿಯಾ ಮೂರು ಹಾಗೂ ನಾಲ್ಕನೇ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿತ್ತು. ಆದರೆ ಈಗ ದಿಢೀರ್ ಆಗಿ ಲಬುಚಾನೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಲುಬುಚಾನೆ ನಂತರ ಆಸ್ಟ್ರೇಲಿಯಾಗೆ ಬಂದಿದ್ದರು. ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆದಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್ ಮತ್ತು ಆಲ್‌ರೌಂಡರ್‌ ಮಿಷೆಲ್ ಮಾರ್ಷ್‌ ಮೆಲ್ಬರ್ನ್‌ನಲ್ಲಿ ವೈಫಲ್ಯ ಕಂಡ ಕಾರಣ ಸಿಡ್ನಿಯಲ್ಲಿ ಅಂತಿಮ 11ರಲ್ಲಿ ಸ್ಥಾನ ಪಡೆದುಕೊಳ್ಳುವುದು ಸಂದೇಹ.

ಸ್ಮಿತ್‌, ವಾರ್ನರ್ ಇರಬೇಕಿತ್ತು: ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲು ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇರಬೇಕಿತ್ತು ಎಂದು ನಾಯಕ ಟಿಮ್ ಪೇನ್ ಅಭಿಪ್ರಾಯಪಟ್ಟರು.

ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಮಿತ್, ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿದೆ.

ಅಂಗಣದಲ್ಲೇ ಕುಡಿದ ರವಿಶಾಸ್ತ್ರಿ!

ಭಾರತ ತಂಡ ಪಂದ್ಯ ಗೆದ್ದ ನಂತರ ಕೋಚ್ ರವಿಶಾಸ್ತ್ರಿ ಅಂಗಣದ ಬದಿಯಲ್ಲೇ ಬಿಯರ್ ಕುಡಿದ ಚಿತ್ರ ಭಾನುವಾರ ಸಂಜೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಪೋಸ್ಟ್ ಮಾಡಿದ ಕೆಲವರು ರವಿಶಾಸ್ತ್ರಿ ಮೇಲೆ ಕಿಡಿ ಕಾರಿದ್ದಾರೆ. ಒಬ್ಬರು ‘ಅವರ ಹೊಟ್ಟೆಯೇ ಎಲ್ಲವನ್ನು ಹೇಳುತ್ತದೆ’ ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ‘ಇಂಥ ಕೋಚ್‌ ಭಾರತ ತಂಡಕ್ಕೆ ಅಗತ್ಯವಿಲ್ಲ’ ಎಂದು ಬರೆದಿದ್ದಾರೆ.

ಸ್ಕೋರ್‌ ಕಾರ್ಡ್‌

ಭಾರತ ಮೊದಲ ಇನಿಂಗ್ಸ್‌ 7ಕ್ಕೆ 443 ಡಿಕ್ಲೇರ್ಡ್‌ (169.4 ಓವರ್‌ಗಳಲ್ಲಿ)

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ 151 (66.5 ಓವರ್‌ಗಳಲ್ಲಿ)

ಭಾರತ ಎರಡನೇ ಇನಿಂಗ್ಸ್‌ 8ಕ್ಕೆ 106ಡಿಕ್ಲೇರ್ಡ್‌ (37.3 ಓವರ್‌ಗಳಲ್ಲಿ)

ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ 261 (89.3 ಓವರ್‌ಗಳಲ್ಲಿ)

(ಶನಿವಾರದ ಅಂತ್ಯಕ್ಕೆ 85 ಓವರ್‌ಗಳಲ್ಲಿ 8ಕ್ಕೆ 258)

ಪ್ಯಾಟ್‌ ಕಮಿನ್ಸ್‌ ಸಿ ಚೇತೇಶ್ವರ ಪೂಜಾರ ಬಿ ಜಸ್‌ಪ್ರೀತ್‌ ಬೂಮ್ರಾ 63

ನೇಥನ್‌ ಲಯನ್‌ ಸಿ ರಿಷಭ್‌ ಪಂತ್‌ ಬಿ ಇಶಾಂತ್‌ ಶರ್ಮಾ 07

ಜೋಶ್‌ ಹ್ಯಾಜಲ್‌ವುಡ್‌ ಔಟಾಗದೆ 00

ಇತರೆ (ಬೈ 2, ಲೆಗ್‌ ಬೈ 6, ವೈಡ್‌ 2) 10

ವಿಕೆಟ್‌ ಪತನ: 9–261 (ಪ್ಯಾಟ್‌ ಕಮಿನ್ಸ್‌ 88.2), 10–261 (ನೇಥನ್‌ ಲಯನ್‌ 89.3)

ಬೌಲಿಂಗ್‌: ಇಶಾಂತ್‌ ಶರ್ಮಾ 14.3–1–40–2 ಜಸ್‌ಪ್ರೀತ್‌ ಬೂಮ್ರಾ 19–3–53–3 (ವೈಡ್ 2), ರವೀಂದ್ರ ಜಡೇಜಾ 32-6-82-3, ಮೊಹಮ್ಮದ್‌ ಶಮಿ 21–2–71–2, ಹನುಮ ವಿಹಾರಿ 3–1–7–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.