ADVERTISEMENT

ಚುಟುಕು, ಏಕದಿನ ಕ್ರಿಕೆಟ್‌ ಸರಣಿ: ಬಾಂಗ್ಲಾ ಪ್ರವಾಸ 2026ಕ್ಕೆ ಮುಂದೂಡಿಕೆ

ಪಿಟಿಐ
Published 6 ಜುಲೈ 2025, 0:22 IST
Last Updated 6 ಜುಲೈ 2025, 0:22 IST
   

ನವದೆಹಲಿ: ಬಾಂಗ್ಲಾದೇಶದಲ್ಲಿ ಚುಟುಕು ಮತ್ತು ಏಕದಿನ ಕ್ರಿಕೆಟ್‌ ಸರಣಿಗಾಗಿ ಈ ವರ್ಷದ ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಭಾರತ ತಂಡದ ಪ್ರವಾಸ 2026ರ ಸೆಪ್ಟೆಂಬರ್‌ಗೆ ಮುಂದೂಡಿಕೆಯಾಗಿದೆ.

ಈ ಸಂಬಂಧ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಶನಿವಾರ ಒಪ್ಪಂದ ಮಾಡಿಕೊಂಡಿವೆ. ಭಾರತ ತಂಡವು ಆಗಸ್ಟ್‌ 17ರಿಂದ 31ರ ವರೆಗಿನ ಪ್ರವಾಸದಲ್ಲಿ ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಬೇಕಾಗಿತ್ತು.

ಈಗಾಗಲೇ ನಿಗದಿಯಾಗಿರುವ ಅಂತರರಾಷ್ಟ್ರೀಯ ಸರಣಿಗಳ ವೇಳಾಪಟ್ಟಿಯನ್ನು ಅವಲೋಕಿಸಿ, ಎರಡೂ ತಂಡಗಳಿಗೆ ಅನುಕೂಲವಾಗುವಂತೆ ಸರಣಿಯನ್ನು 2026ರ ಸೆಪ್ಟೆಂಬರ್‌ನಲ್ಲಿ ಮರುನಿಗದಿ ಮಾಡಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟ ಮಾಡಲಾಗುವುದು ಎಂದು ಬಿಸಿಬಿ ತಿಳಿಸಿದೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಯ ನಂತರ ಅಲ್ಲಿ ತಲೆದೋರಿದ್ದ ಆಂತರಿಕ ಸಂಘರ್ಷ ಇನ್ನೂ ಶಮನ ಆಗದಿರುವ ಬಗ್ಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಸ್ಥಿರ ಸರ್ಕಾರ ರಚನೆಯಾಗುವವರೆಗೆ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದೆ ಎಂಬುದಾಗಿ ವರದಿಯಾಗಿತ್ತು.

ಬಾಂಗ್ಲಾದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.