ADVERTISEMENT

IND vs NZ: ಕಿಂಗ್ ಕೊಹ್ಲಿ ದಾಖಲೆ; ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50 ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 10:54 IST
Last Updated 6 ಡಿಸೆಂಬರ್ 2021, 10:54 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 372 ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಬಳಗವು ಅನೇಕ ದಾಖಲೆಗಳನ್ನು ಬರೆದಿವೆ.

ಕಿಂಗ್ ಕೊಹ್ಲಿ ದಾಖಲೆ
ನ್ಯೂಜಿಲೆಂಡ್ ವಿರುದ್ಧದ ಗೆಲುವಿನೊಂದಿಗೆಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ತಲಾ 50 ಗೆಲುವುಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿಭಾಜನರಾಗಿದ್ದಾರೆ. ಅಲ್ಲದೆ ಈ ದಾಖಲೆಯನ್ನು ಬರೆದ ವಿಶ್ವದಏಕಮಾತ್ರ ಆಟಗಾರ ಎನಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತಿ ದೊಡ್ಡ ಗೆಲುವು...
ಇದು ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ಯಾವುದೇ ತಂಡದ ವಿರುದ್ಧ ಭಾರತ ಗಳಿಸಿದ ಅತಿ ದೊಡ್ಡ (ರನ್ ಅಂತರದಲ್ಲಿ) ಗೆಲುವಾಗಿದೆ. ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿ ಟೆಸ್ಟ್ ಪಂದ್ಯದಲ್ಲಿ 337 ರನ್ ಅಂತರದ ಗೆಲುವು ದಾಖಲಿಸಿತ್ತು.

ಹಾಗೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕಿವೀಸ್‌ಗೆ ಎದುರಾದ ಅತಿ ಹೀನಾಯ ಸೋಲು ಇದಾಗಿದೆ. 2016ರ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧವೇ 321 ರನ್ ಅಂತರದ ಸೋಲಿಗೆ ಶರಣಾಗಿತ್ತು.

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌‌ನಲ್ಲಿ ಭಾರತ ನಂ.1
ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಐಸಿಸಿ ಟೆಸ್ಟ್ ಟೆಸ್ಟ್ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ತಂಡವು ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ.

ತವರಿನಲ್ಲಿ ಅಶ್ವಿನ್‌ 300 ವಿಕೆಟ್ ಸಾಧನೆ
ತವರು ನೆಲದಲ್ಲಿ ಅಶ್ವಿನ್ 300 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಭಾರತದ ಪರ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ತವರಿನಲ್ಲಿ 350 ವಿಕೆಟ್‌ಗಳ ಸಾಧನೆಗೈದಿದ್ದಾರೆ.

ತವರು ನೆಲದಲ್ಲಿ ಅತಿ ವೇಗದಲ್ಲಿ 300 ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (48 ಪಂದ್ಯ) ನಂತರದ ಸ್ಥಾನವನ್ನು ಅಶ್ವಿನ್ (49 ಪಂದ್ಯ) ಹೊಂದಿದ್ದಾರೆ.

ತವರಿನಲ್ಲಿ ಸತತ 14ನೇ ಸರಣಿ ಗೆಲುವು
ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವಿನೊಂದಿಗೆ ತವರಿನಲ್ಲಿ ಆಡಿದ 14 ಟೆಸ್ಟ್ ಸರಣಿಗಳಲ್ಲಿ ಭಾರತವು ಸತತವಾಗಿ ಜಯ ಸಾಧಿಸಿದಂತಾಗಿದೆ.

ಎಜಾಜ್ ಪಟೇಲ್ 10 ವಿಕೆಟ್ ಸಾಧನೆ
ಇದೇ ಪಂದ್ಯದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್ ಪಡೆದ ದಾಖಲೆಗೆ ಎಜಾಜ್ ಪಟೇಲ್ ಭಾಜನರಾದರು. ಈ ಮೂಲಕ ಮಾಜಿ ಬೌಲರ್‌ಗಳಾದ ಇಂಗ್ಲೆಂಡ್‌ನ ಜಿಮ್ ಲೇಕರ್ ಹಾಗೂ ಭಾರತದ ಅನಿಲ್ ಕುಂಬ್ಳೆ ಸಾಲಿಗೆ ಸೇರ್ಪಡೆಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.