ADVERTISEMENT

ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಬರೆದ ಭಾರತ 

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:40 IST
Last Updated 26 ಸೆಪ್ಟೆಂಬರ್ 2022, 4:40 IST
ವಿರಾಟ್‌ ಕೊಹ್ಲಿ ಆಟದ ವೈಖರಿ
ವಿರಾಟ್‌ ಕೊಹ್ಲಿ ಆಟದ ವೈಖರಿ    

ಹೈದರಾಬಾದ್‌: ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತ ಈ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆ.

ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಗೆದ್ದಿರುವ ಟೀಂ ಇಂಡಿಯಾ, ಈ ವರ್ಷ ಒಟ್ಟಾರೆ 21 ವಿಜಯಗಳನ್ನು ಸಾಧಿಸಿದೆ.

2021ರಲ್ಲಿ 20 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವಿಶ್ವ ದಾಖಲೆ ಮಾಡಿತ್ತು. ಭಾರತವು ಈ ವರ್ಷ ತವರು ನೆಲದಲ್ಲೇ 10 ಟಿ20 ಪಂದ್ಯಗಳನ್ನು ಗೆದ್ದಿದೆ.

ADVERTISEMENT

2019 ರಲ್ಲಿ 21 ಗೆಲುವು ಮತ್ತು ನಾಲ್ಕು ಸೋಲುಗಳನ್ನು ದಾಖಲಿಸಿದ ಥಾಯ್ಲೆಂಡ್ ಮಹಿಳಾ ತಂಡದೊಂದಿಗೆ ಭಾರತ ಸಮಬಲ ಸಾಧಿಸಿದೆ.

ಭಾನುವಾರ ನಡೆದ ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿನಾಟ (69) ಹಾಗೂ ವಿರಾಟ್ ಕೊಹ್ಲಿ (63) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಭಾರತ ತಂಡವು ರೋಚಕ ಜಯಸಾಧಿಸಿತು.

ಇದರೊಂದಿಗೆ 2–1ರಿಂದ ಸರಣಿಯನ್ನು ಗೆದ್ದ ತಂಡವು ಸಂಭ್ರಮಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆಸ್ಟ್ರೇಲಿಯಾವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್‌ ಗಳಿಸಿ ಕಠಿಣ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಪಂದ್ಯದಲ್ಲಿ ಇನ್ನೂ ಒಂದು ಎಸೆತ ಬಾಕಿಯಿರುವಾಗಲೇ 6 ವಿಕೆಟ್‌ಗಳಿಂದ ಜಯಿಸಿತು.

ಆದರೆ ಹೋದ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಇಲ್ಲಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ವಿಕೆಟ್ ಪತನ ತಡೆ ದರು. ಚೆಂದದ ಹೊಡೆತಗಳನ್ನೂ ಪ್ರಯೋಗಿಸಿದರು. ಆದರೆ, ಸೂರ್ಯಕುಮಾರ್ ಮಾತ್ರ ವಿರಾಟ್‌ಗಿಂತಲೂ ವೇಗವಾಗಿ ರನ್‌ ಗಳಿಸಿದರು. ಎಲ್ಲ ಬೌಲರ್‌ಗಳ ಎಸೆತ ಗಳನ್ನೂ ದಂಡಿಸಿದರು. 191.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.