ದಿನೇಶ್ ಕಾರ್ತಿಕ್
ಪಿಟಿಐ ಚಿತ್ರ
ಬೆಂಗಳೂರು: ‘ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೂಲಕ ಭಾರತ ಕ್ರಿಕೆಟ್ ತಂಡವು ಸಮಾನ ಗುಣಮಟ್ಟದ ಮೂರು ತಂಡಗಳನ್ನು ಏಕಕಾಲಕ್ಕೆ ಕಣಕ್ಕಿಳಿಸುವ ಸಾಮರ್ಥ್ಯ ಹೊಂದಿದೆ’ ಎಂದು ಭಾರತ ಕ್ರಿಕೆಟ್‌ನ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಪಡುಕೋಣೆ ದ್ರಾವಿಡ್ ಕ್ರೀಡಾ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ದಿನೇಶ್, ‘ಭಾರತ ಕ್ರಿಕೆಟ್‌ನ ಮನಸ್ಥಿತಿಯನ್ನೇ ಐಪಿಎಲ್ ಬದಲಾಯಿಸಿದೆ. ಇದರಿಂದಾಗಿ ಇಲ್ಲಿನ ಕ್ರಿಕೆಟ್ ಮೂಲಸೌಕರ್ಯವೂ ಉತ್ತಮವಾಗಿದೆ’ ಎಂದಿದ್ದಾರೆ.
‘ಐಪಿಎಲ್‌ನಿಂದಾಗಿ ಭಾರತ ತಂಡದ ಆಟಗಾರರಲ್ಲಿ ಗೆಲ್ಲುವ ಮನೋಭಾವ ವೃದ್ಧಿಸಿದೆ. ಈ ಮಾದರಿಯ ಕ್ರಿಕೆಟ್‌ನ ಬೆಳವಣಿಗೆಯಿಂದಾಗಿ ಬಹುತೇಕ ತಂಡಗಳು ಸಾಕಷ್ಟು ಹಣ ಗಳಿಸುತ್ತಿವೆ. ಇದು ಮರಳಿ ಕ್ರಿಕೆಟ್‌ನ ಮೂಲಸೌಕರ್ಯಕ್ಕೇ ಬಳಕೆಯಾಗುತ್ತಿವೆ. ಇದರಿಂದ ಕ್ರೀಡೆಯ ಗುಣಮಟ್ಟವೂ ಹೆಚ್ಚಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತ ಕ್ರಿಕೆಟ್‌ನಲ್ಲಿ ಐಪಿಎಲ್ ಹಾಸುಹೊಕ್ಕಾಗಿರುವುದರಿಂದ, ಎರಡರಿಂದ ಮೂರು ತಂಡಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಏಕಕಾಲಕ್ಕೆ ಕಳುಹಿಸುವಷ್ಟು ಸದೃಢವಾಗಿದೆ. ತಂಡದಲ್ಲಿರುವ ಪ್ರತಿಯೊಬ್ಬರೂ ಪರಸ್ಪರ ಪ್ರತಿಸ್ಪರ್ಧಿಗಳೇ ಆಗಿದ್ದಾರೆ. ಸಕಲ ಕೌಶಲಗಳೊಂದಿಗೆ ಭಾರತೀಯ ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ಉನ್ನತ ಸ್ಥಾನದಲ್ಲಿದೆ’ ಎಂದು ದಿನೇಶ್ ಕಾರ್ತಿಕ್ ಬಣ್ಣಿಸಿದ್ದಾರೆ.
‘ಒಂದು ಕಾಲದಲ್ಲಿ ಆಸ್ಟ್ರೇಲಿಯಾ ತಂಡ ಇದೇ ಮನಸ್ಥಿತಿಯಲ್ಲಿತ್ತು. ಪ್ರತಿ ಆಟವನ್ನೂ ಗೆಲ್ಲಲು ಹೊರಟ ತೋಳಗಳ ತಂಡದಂತೆ ಭಾಸವಾಗುತ್ತಿತ್ತು. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೇನ್ ಮೆಗ್ರಾತ್ ಅವರೊಂದಿಗೆ ಆಡುವ ಅವಕಾಶ ನನಗೆ ದೊರಕಿತು. ಅದು ಅವರನ್ನು ಅರಿಯಲು ನೆರವಾಯಿತು. ಇದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿತು. ಜತೆಗೆ ಆಟವನ್ನು ನೋಡುವ ಆಲೋಚನಾ ಕ್ರಮವೇ ಬದಲಾಯಿತು’ ಎಂದು ನೆನಪಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.