
ತಿರುವನಂತಪುರ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧ ಶತಕದ ಆಟವು ವ್ಯರ್ಥವಾಗದಂತೆ
ಭಾರತ ತಂಡದ ಬೌಲರ್‌ಗಳು ನೋಡಿಕೊಂಡರು. ಇದರಿಂದಾಗಿ ಆತಿಥೇಯ ತಂಡವು ಶ್ರೀಲಂಕಾ ಎದುರಿನ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು.
ಮಂಗಳವಾರ ಇಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ಹರ್ಮನ್ (68; 43ಎ, 4X9, 6X1) ಮತ್ತು ಅಮನ್ಜೋತ್ ಕೌರ್ (21; 18ಎ, 4X1, 6X1) ಅವರು ಆರನೇ ವಿಕೆಟ್ ಜೊತೆಯಾಟದಲ್ಲಿ 37 ಎಸೆತಗಳಲ್ಲಿ 61 ರನ್ ಸೇರಿಸಿದರು.
ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಅರುಂಧತಿ ರೆಡ್ಡಿ 11 ಎಸೆತಗಳಲ್ಲಿ 27 ರನ್ ಸಿಡಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 175 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ದಿಟ್ಟ ಹೋರಾಟ ಮಾಡಿತು. ಹಾಸಿನಿ ಪೆರೆರಾ (65; 42ಎ, 4X8, 6X1) ಮತ್ತು ಇಮೇಶಾ ದುಲಾನಿ (50; 39ಎ, 4X8) ಉತ್ತಮ ಬ್ಯಾಟಿಂಗ್ ಮಾಡಿದರು. ಆದರೂ ಗುರಿ ಮುಟ್ಟಲು ಸಾಧ್ಯವಾಗ ಲಿಲ್ಲ. ಲಂಕಾ ತಂಡವು 20 ಓವರ್‌ಗಳಲ್ಲಿ 7ಕ್ಕೆ160 ರನ್ ಗಳಿಸಿತು. ಭಾರತ ತಂಡದ ಏಳು ಬೌಲರ್‌ಗಳೂ ತಲಾ ಒಂದು ವಿಕೆಟ್ ಗಳಿಸಿದರು.
ಹರ್ಮನ್ ಅರ್ಧಶತಕ: ಅಗ್ರಕ್ರಮಾಂಕದ ಬ್ಯಾಟರ್‌ಗಳು ಆಡಲು ಕಷ್ಟಪಟ್ಟಿದ್ದ ಪಿಚ್‌ನಲ್ಲಿ ಹರ್ಮನ್ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದರು. ಅನುಭವಿ ಆಟಗಾರ್ತಿ ಲಂಕಾದ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಕವಿಶಾ ದಿಲ್ಹರಿ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆಗುವ ಮುನ್ನ ಕೌರ್ ಅವರು ತಮ್ಮ ತಂಡವನ್ನು ಉತ್ತಮ ಸ್ಥಿತಿಗೆ ತಂದಿದ್ದರು.
ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಗಳಿಸಿದ್ದ ಶಫಾಲಿ ವರ್ಮಾ ಅವರು ಜಿ. ಕಮಲಿನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಎಡಗೈ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ ವಿಶ್ರಾಂತಿ ನೀಡಲಾಯಿತು.
ಶಫಾಲಿ ಕೇವಲ 5 ರನ್ ಗಳಿಸಿದರು. ನಿಮಿಷಾ ಮಧುಶಾನಿ ಅವರ ಎಸೆತದಲ್ಲಿ ಇಮೇಶಾ ದುಲಾನಿಗೆ ಕ್ಯಾಚಿತ್ತರು. ಕಮಲಿನಿ (12 ರನ್) ಅವರು ಕವಿಶಾ ದಿಲ್ಹರಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು. ಉತ್ತಮ ಲಯದಲ್ಲಿದ್ದಂತೆ ಕಂಡ ಹರ್ಲಿನ್ ಡಿಯೊಲ್ (13 ರನ್) ಅವರನ್ನು ರಶ್ಮಿಕಾ ಸೆವಂಡಿ ಕ್ಲೀನ್‌ಬೌಲ್ಡ್ ಮಾಡಿದರು. ರಿಚಾ ಘೋಷ್ ಹಾಗೂ ದೀಪ್ತಿ ಶರ್ಮಾ ಕೂಡ ಎರಡಂಕಿ ಮುಟ್ಟಲಿಲ್ಲ.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 7ಕ್ಕೆ175 (ಹರ್ಮನ್‌ಪ್ರೀತ್ ಕೌರ್ 68, ಅಮನ್ಜೋತ್ ಕೌರ್ 21, ಅರುಂಧತಿ ರೆಡ್ಡಿ ಔಟಾಗದೇ 27, ಕವಿಶಾ ದಿಲ್ಹರಿ 11ಕ್ಕೆ2, ರಶ್ಮಿಕಾ ಸೆವಂಡಿ 42ಕ್ಕೆ2, ಚಾಮರಿ ಅಟಪಟ್ಟು 21ಕ್ಕೆ2). ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160 (ಹಾಸಿನಿ ಪೆರೆರಾ 65, ಇಮೇಶಾ ದುಲಾನಿ 50; ದೀಪ್ತಿ ಶರ್ಮಾ 28ಕ್ಕೆ1, ಶ್ರೀಚರಣಿ 31ಕ್ಕೆ1).
ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್
ಸರಣಿಯ ಆಟಗಾರ್ತಿ: ಶಫಾಲಿ ವರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.