ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟ್ವೆಂಟಿ-20 ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಹಿಂದಿಕ್ಕಿರುವ ಭಾರತ, ಅಗ್ರಸ್ಥಾನಕ್ಕೇರಿದೆ.
ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ 17 ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.
ಈ ಮೂಲಕ ರೋಹಿತ್ ಶರ್ಮಾ ಕಪ್ತಾನಗಿರಿಯಲ್ಲಿ ಭಾರತ ತಂಡವು ವಿಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ವೈಟ್‌ವಾಶ್ ಸಾಧನೆಗೈದಿದೆ.
ಭಾರತ ತಂಡವು ಇಂಗ್ಲೆಂಡ್ ಜೊತೆಗೆ ಸಮಾನ ರೇಟಿಂಗ್ (269) ಹಂಚಿಕೊಂಡಿದೆ. ಆದರೆ 39 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 10,484 ಅಂಕಗಳನ್ನು ಕಲೆ ಹಾಕಿ ಅಗ್ರಸ್ಥಾನ ವಶಪಡಿಸಿಕೊಂಡಿದೆ. ಇಂಗ್ಲೆಂಡ್ ಅಷ್ಟೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10,474 ಅಂಕಗಳನ್ನು ಹೊಂದಿದೆ.
ಅಗ್ರ ಐದರಲ್ಲಿ ಪಾಕಿಸ್ತಾನ (266), ನ್ಯೂಜಿಲೆಂಡ್ (255), ದಕ್ಷಿಣ ಆಫ್ರಿಕಾ (253) ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ (249) ಆರನೇ ಸ್ಥಾನದಲ್ಲಿದೆ. ಭಾರತ ವಿರುದ್ಧ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿರುವ ವಿಂಡೀಸ್ (235) ಏಳನೇ ಸ್ಥಾನದಲ್ಲಿದೆ.
ಬ್ಯಾಟರ್‌ಗಳ ಪೈಕಿ ಭಾರತದ ಕೆ.ಎಲ್.ರಾಹುಲ್ ನಾಲ್ಕನೇ ಸ್ಥಾನದಲ್ಲೂ ವಿರಾಟ್ ಕೊಹ್ಲಿ 10ನೇ ಸ್ಥಾನದಲ್ಲೂ ಇದ್ದಾರೆ. ಉಳಿದ ಯಾರಿಗೂ ಅಗ್ರ ಹತ್ತರಲ್ಲಿ ಸ್ಥಾನ ಪಡೆದುಕೊಳ್ಳಲು ಆಗಲಿಲ್ಲ.
ಏತನ್ಮಧ್ಯೆ ಭಾರತ ತಂಡವು ಟೆಸ್ಟ್‌ನಲ್ಲಿ ಮೂರು ಹಾಗೂ ಏಕದಿನದಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.
ಐಸಿಸಿ ಟ್ವೆಂಟಿ-20 ತಂಡರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಭಾರತ (269)
2. ಇಂಗ್ಲೆಂಡ್ (269)
3. ಪಾಕಿಸ್ತಾನ (266)
4. ನ್ಯೂಜಿಲೆಂಡ್ (255)
5. ದ.ಆಫ್ರಿಕಾ (253)
6. ಆಸ್ಟ್ರೇಲಿಯಾ (249)
7. ವೆಸ್ಟ್ ಇಂಡೀಸ್ (235)
8. ಅಫ್ಗಾನಿಸ್ತಾನ (232)
9. ಶ್ರೀಲಂಕಾ (231)
10. ಬಾಂಗ್ಲಾದೇಶ (231)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.