ADVERTISEMENT

ಕೇವಲ ಒಂದು ಸೋಲಿನಿಂದ ಆತಂಕಕ್ಕೊಳಗಾಗುವ ಅಗತ್ಯವಿಲ್ಲ: ರವಿಶಾಸ್ತ್ರಿ

ಏಜೆನ್ಸೀಸ್
Published 28 ಫೆಬ್ರುವರಿ 2020, 14:01 IST
Last Updated 28 ಫೆಬ್ರುವರಿ 2020, 14:01 IST
   

ಕ್ರೈಸ್ಟ್‌ಚರ್ಚ್‌:ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎದುರಾಗಿರುವ ಒಂದು ಸೋಲಿನಿಂದಾಗಿ ಟೀಂ ಇಂಡಿಯಾಆತಂಕ ಪಡುವ ಅಗತ್ಯವಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಮುಖ್ಯಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಏಳು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾಗೆ ಕಿವೀಸ್‌ ನೆಲದಲ್ಲಿ ಮೊದಲ ಸೋಲು ಎದುರಾಗಿದೆ. ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆಯುತ್ತಿರುವ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ, 10 ವಿಕೆಟ್‌ಗಳ ಸೋಲು ಕಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಸ್ತ್ರಿ, ‘ಕೇವಲ ಒಂದು ಸೋಲಿನಿಂದಾಗಿ ನಾವು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಆಟಗಾರರು ಮುಂದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಅವರಿಂದ ಏನನ್ನು ನಿರೀಕ್ಷಿಸಲಾಗುತ್ತಿದೆ ಎಂಬುದನ್ನು ಅರಿತು ಮಾನಸಿಕವಾಗಿಸಿದ್ಧರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಮುಂದುವರಿದು ಭಾರತ ತಂಡವು ಮುಂದಿನ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನತ್ತಲೇ ಹೆಚ್ಚಾಗಿ ಗಮನಹರಿಸಲಿದೆ ಎಂದು ಹೇಳಿದ್ದಾರೆ. ‘ನಾನು ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ಅನ್ನು ತುಲನೆ ಮಾಡಲು ಹೋಗುವುದಿಲ್ಲ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ನಾವು ಆಡಲಿರುವ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿರಿಸಿ ಏಕದಿನ ಕ್ರಿಕೆಟ್‌ಗೆ ಕೊನೆಯ ಪ್ರಾಶಸ್ತ್ಯ ನೀಡಿದ್ದೇವೆ. ನಮ್ಮ ಮೊದಲ ಆದ್ಯತೆ ಟೆಸ್ಟ್‌ ಕ್ರಿಕೆಟ್‌ ಆಗಿದೆ. ಆದ್ದರಿಂದಾಗಿನಾವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಟಿ20 ಕ್ರಿಕೆಟ್‌ ಎರಡನೇ ಸ್ಥಾನ ನೀಡಿದ್ದೇವೆ. ’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಕಿವೀಸ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ನಾಳೆಯಿಂದ ಆರಂಭವಾಗಲಿದೆ.

ಅಂಕಪಟ್ಟಿಯಲ್ಲಿ ಭಾರತದ ಸನಿಹಕ್ಕೆ ಆಸಿಸ್‌
ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಏಳನ್ನು ಗೆದ್ದು, ಒಂದರಲ್ಲಿ ಸೋತಿರುವ ಭಾರತ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿರಾಟ್‌ ಕೊಹ್ಲಿ ಬಳಗದ ಖಾತೆಯಲ್ಲಿ ಒಟ್ಟು 360 ಅಂಕಗಳಿವೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ. ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2 ಸೋಲು ಹಾಗೂ 1 ಡ್ರಾ ಸಾಧಿಸಿರುವ ಆಸಿಸ್‌ ಖಾತೆಯಲ್ಲಿ 296 ಪಾಯಿಂಟ್ಸ್‌ ಇವೆ.

ಇಂಗ್ಲೆಂಡ್‌ (146) ಮತ್ತುಪಾಕಿಸ್ತಾನ (140) ಕ್ರಮವಾಗಿ 3 ಹಾಗೂ 4ನೇ ಸ್ಥಾನಗಳಲ್ಲಿವೆ.

ಪಾಯಿಂಟ್‌ ಹಂಚಿಕೆ ಹೇಗೆ?
ಯಾವುದೇ ಸ್ವರೂಪದ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸುವ ತಂಡಕ್ಕೆ120 ಅಂಕ ಲಭಿಸುತ್ತದೆ.

ಎರಡು ಪಂದ್ಯದ ಸರಣಿಯಾದರೆ, ಒಂದು ಪಂದ್ಯದ ಗೆಲುವಿಗೆ ವಿಜಯಿ ತಂಡಕ್ಕೆ 60 ಅಂಕ ಲಭಿಸುತ್ತದೆ.ಪಂದ್ಯ ಸಮಬಲವಾದರೆ ಉಭಯ ತಂಡಗಳಿಗೆ30 ಅಂಕ ಮತ್ತುಡ್ರಾ ಆದರೆ 20 ಅಂಕ ಲಭಿಸುತ್ತವೆ.

ಮೂರು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ 40 ಅಂಕ ಸಿಗುತ್ತದೆ. ಪಂದ್ಯ ಸಮಬಲವಾದರೆ ಎರಡೂ ತಂಡಗಳಿಗೆ 20 ಅಂಕ ಮತ್ತು ಡ್ರಾ ಆದರೆ 13 ಅಂಕ ದೊರೆಯುತ್ತದೆ.

ನಾಲ್ಕು ಪಂದ್ಯಗಳ ಸರಣಿಯಾದರೆ, ಗೆಲುವಿಗೆ 30 ಅಂಕ, ಸಮಬಲವಾದರೆ 15 ಅಂಕ ಮತ್ತು ಡ್ರಾ ಆದರೆ, 10 ಅಂಕ ನೀಡಲಾಗುತ್ತದೆ.

ಆ್ಯಷಸ್‌ನಂತಹ (ಐದು ಪಂದ್ಯಗಳ) ಸರಣಿಗಳಲ್ಲಿ ಒಂದು ಪಂದ್ಯದ ಗೆಲುವಿಗೆ ಸಿಗುವುದು24 ಅಂಕ ಮಾತ್ರ. ಸಮಬಲವಾದರೆ 12 ಅಂಕ ಮತ್ತು ಡ್ರಾ ಆದರೆ, 8 ಅಂಕ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.