ದುಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.
ನಾಲ್ಕರ ಘಟ್ಟದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಎರಡೂ ತಂಡಗಳು ಬಲಾಢ್ಯವಾಗಿವೆ. ಆದ್ದರಿಂದ ನ್ಯೂಜಿಲೆಂಡ್ ಎದುರಿನ ಈ ಪಂದ್ಯವು ರೋಹಿತ್ ಶರ್ಮಾ ಬಳಗಕ್ಕೆ ಪೂರ್ವಸಿದ್ಧತೆ ಪರೀಕ್ಷೆಯಾಗಲಿದೆ. ಸ್ಪಿನ್ ಬೌಲಿಂಗ್ ಎದುರು ಆಡುವ ಕೌಶಲಗಳನ್ನು ಉತ್ತಮಪಡಿಸಿಕೊಳ್ಳಲು ಬ್ಯಾಟರ್‌ಗಳು ಒತ್ತು ನೀಡಲಿದ್ದಾರೆ.
ದುಬೈನಲ್ಲಿರುವ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವುದರಿಂದ ಭಾರತದ ಸ್ಪಿನ್ನರ್‌ಗಳೂ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಶತಕ ಹೊಡೆದು ಲಯಕ್ಕೆ ಮರಳಿದ್ದು ತಂಡದಲ್ಲಿ ನವಶಕ್ತಿ ತುಂಬಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಯಥಾಪ್ರಕಾರ ಉತ್ತಮ ಆರಂಭ ನೀಡಿದರೆ, ಕೊಹ್ಲಿ , ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಮೊತ್ತ ಹೆಚ್ಚಿಸುವ ಕಾರ್ಯ ಮಾಡಬಹುದು. ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರಿಗೆ ವಿಶ್ರಾಂತಿ ಕೊಟ್ಟು ರಿಷಭ್ ಪಂತ್‌ಗೆ ವಿಕೆಟ್‌ಕೀಪಿಂಗ್ ಹೊಣೆ ನೀಡಬಹುದು.
ಬೌಲಿಂಗ್ ವಿಭಾಗದಲ್ಲಿ ಶಮಿ ಅವರಿಗೆ ವಿಶ್ರಾಂತಿ ನೀಡಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ವೇಗದ ವಿಭಾಗದ ಹೊಣೆ ನಿಭಾಯಿಸುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಶಮಿ ಕಾಲುನೋವು ಅನುಭವಿಸಿದ್ದರು. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಅಥವಾ ರವೀಂದ್ರ ಜಡೇಜ ಅವರನ್ನು ಬಿಟ್ಟು, ವರುಣ ಚಕ್ರವರ್ತಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ತಂಡವು ಉತ್ತಮ ಸಮತೋಲನ ಹೊಂದಿದೆ. ಮಿಚೆಲ್ ಸ್ಯಾಂಟನರ್ ನಾಯಕತ್ವದ ಕಿವೀಸ್ ಬಳಗದ ವಿಲ್ ಯಂಗ್, ಟಾಮ್ ಲೇಥಮ್ ಮತ್ತು ರಚಿನ್ ರವೀಂದ್ರ ಈಗಾಗಲೇ ಶತಕ ಹೊಡೆದು ಉತ್ತಮ ಲಯದಲ್ಲಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್, ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಅಬ್ಬರದ ಆಟದ ಮೂಲಕ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅನುಭವಿ ಕೇನ್ ವಿಲಿಯಮ್ಸನ್ ಮಾತ್ರ ಲಯಕ್ಕೆ ಮರಳಿಲ್ಲ. ಅದರಿಂದ ಬೆಂಚ್‌ನಲ್ಲಿರುವ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ನೆಟ್ ಬೌಲರ್‌ಗೆ ಶ್ರೇಯಸ್ ಬೂಟ್ಸ್ ಕಾಣಿಕೆ
ದುಬೈ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಐಸಿಸಿಯು ನಿಯೋಜಿಸಿರುವ ನೆಟ್ ಬೌಲರ್ ಜಸ್‌ಕಿರಣ್ ಸಿಂಗ್ ಅವರಿಗೆ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಒಂದು ಜೊತೆ ಸ್ಪೈಕ್ಸ್ (ಬೂಟು) ಉಡುಗೊರೆ ನೀಡಿದರು. ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಜಸ್‌ಕಿರಣ್ ಅವರಿಗೆ ಕ್ರಿಕೆಟ್ ಎಂದರೆ ಅಪಾರ ಪ್ರೀತಿ. ‘ಶ್ರೇಯಸ್ ಭಾಯ್ ನನ್ನ ಬಳಿ ಬಂದು ಬೂಟುಗಳ ಅಳತೆ ಎಷ್ಟು ಎಂದು ಪ್ರಶ್ನಿಸಿದರು. ನಾನು ಅದಕ್ಕೆ 10 ಎಂದು ಉತ್ತರಿಸಿದೆ. ಅದಕ್ಕವರು ನಿಮಗಾಗಿ ನನ್ನ ಬಳಿ ಏನೋ ವಿಶೇಷ ಇದೆ ಎಂದರು. ಸ್ಪೈಕ್ಸ್ ನೀಡಿದರು. ಇದು ನಿಜವಾಗಿಯೂ ನನಗೆ ಬಹಳ ಸಂತಸವಾಗಿದೆ’ ಎಂದು ಜಸ್‌ಕಿರಣ್ ಅವರು ಪಿಟಿಐ ವಿಡಿಯೊಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಐಸಿಸಿಯ ನೆಟ್ ಬೌಲರ್‌ಗಳ ತಂಡದಲ್ಲಿ ಜಸ್‌ಕಿರಣ್ ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಿದ್ಧಾರೆ. ಆದರೆ ಭಾರತದ ಎದುರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿಲ್ಲವೆಂದು ಬೇಸರಗೊಂಡಿದ್ದರು. ಭಾರತ ತಂಡದಲ್ಲಿಯೇ ಹೆಚ್ಚು ಮಂದಿ ಆಫ್‌ಸ್ಪಿನ್ನರ್‌ಗಳು ಇದ್ದ ಕಾರಣ ಜಸ್‌ಕಿರಣ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ‘ಈ ಟೂರ್ನಿಯಲ್ಲಿ ನೆಟ್ ಬೌಲಿಂಗ್ ತಂಡದಲ್ಲಿದ್ದೇನೆ. ಈ ಟೂರ್ನಿಯಲ್ಲಿ ಭಾರತದ ಅಭ್ಯಾಸದಲ್ಲಿ ಫೀಲ್ಡಿಂಗ್ ಮಾಡಿರುವೆ. ಪಾಕ್ ಮತ್ತು ಬಾಂಗ್ಲಾ ಆಟಗಾರರಿಗೆ ಬೌಲಿಂಗ್ ಮಾಡಿರುವೆ. ಇದೊಂದು ಬಹಳ ಉತ್ತಮವಾದ ಅನುಭವ ಲಭಿಸಿದೆ. ಆದರೆ ಶ್ರೇಯಸ್ ಅಯ್ಯರ್ ಅವರು ನನಗೆ ವಿಶೇಷ ಕಾಣಿಕೆ ನೀಡಿದ್ದಾರೆ. ಇದು ಅವಿಸ್ಮರಣೀಯ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.