ADVERTISEMENT

ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್‌ ಎದುರು ಭಾರತ ತಂಡ ಶುಭಾರಂಭ

ಇಂಗ್ಲೆಂಡ್‌ ಮಹಿಳಾ ತಂಡದ ಎದುರಿನ ಏಕದಿನ ಸರಣಿಯ ಉದ್ಘಾಟನಾ ಪಂದ್ಯ

ಪಿಟಿಐ
Published 22 ಫೆಬ್ರುವರಿ 2019, 19:39 IST
Last Updated 22 ಫೆಬ್ರುವರಿ 2019, 19:39 IST
ಇಂಗ್ಲೆಂಡ್‌ ತಂಡದ ವಿಕೆಟ್‌ ಉರುಳಿದಾಗ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು -ಪಿಟಿಐ ಚಿತ್ರ
ಇಂಗ್ಲೆಂಡ್‌ ತಂಡದ ವಿಕೆಟ್‌ ಉರುಳಿದಾಗ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು -ಪಿಟಿಐ ಚಿತ್ರ   

ಮುಂಬೈ: ಬಲಿಷ್ಠ ಇಂಗ್ಲೆಂಡ್ ತಂಡವನ್ನು 66 ರನ್‌ಗಳಿಂದ ಮಣಿಸಿದ ಭಾರತ ತಂಡ, ಮಹಿಳೆಯರ ವಿಶ್ವ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆಯಿತು. ಮೊದಲು ಬ್ಯಾಟಿಂಗ್ ಮಾಡಿ 202 ರನ್‌ಗಳಿಗೆ ಆಲೌಟಾದರೂ ಎದುರಾಳಿಗಳನ್ನು 136 ರನ್‌ಗಳಿಗೆ ಭಾರತ ಕೆಡವಿತು.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ಹಿದರ್ ನೈಟ್‌ ಫೀಲ್ಡಿಂಗ್ ಆಯ್ದುಕೊಂಡರು. ಸ್ಫೋಟಕ ಬ್ಯಾಟ್ಸ್‌ವುಮನ್‌ಗಳಾದ ಜೆಮಿಮಾ ರಾಡ್ರಿಗಸ್ (48; 58 ಎಸೆತ, 8 ಬೌಂಡರಿ) ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್‌ಗೆ 69 ರನ್‌ ಸೇರಿಸಿ ಭಾರಿ ಮೊತ್ತ ಕಲೆ ಹಾಕುವ ಭರವಸೆ ಮೂಡಿಸಿದರು. ಆದರೆ 16ನೇ ಓವರ್‌ನಲ್ಲಿ ಇವರಿಬ್ಬರ ಜೊತೆಯಾಟಕ್ಕೆ ಜಾರ್ಜಿಯಾ ಎಲ್ವಿಸ್ ತೆರೆ ಎಳೆದರು.

ADVERTISEMENT

ನಂತರ ನಿರಂತರವಾಗಿ ವಿಕೆಟ್‌ಗಳು ಉರುಳಿದವು. 22ನೇ ಓವರ್‌ನಲ್ಲಿ 95 ರನ್ ಗಳಿಸುವಷ್ಟರಲ್ಲಿ ತಂಡದ ಐದು ವಿಕೆಟ್‌ಗಳು ಉರುಳಿದವು. ಈ ಸಂದರ್ಭದಲ್ಲಿ ಜೊತೆಗೂಡಿದ ನಾಯಕಿ ಮಿಥಾಲಿ ರಾಜ್ (44; 74 ಎಸೆತ, 4 ಬೌಂಡರಿ) ಮತ್ತು ತನಿಯಾ ಭಾಟಿಯಾ 54 ರನ್‌ಗಳ ಜೊತೆಯಾಟ ಆಡಿದರು. ಭಾಟಿಯಾ ರನ್‌ ಔಟ್‌ ಆದ ನಂತರ ಜೂಲನ್ ಗೋಸ್ವಾಮಿ (30; 37 ಎಸೆತ, 1 ಸಿಕ್ಸರ್‌, 3 ಬೌಂಡರಿ) ಭರ್ಜರಿ ಬ್ಯಾಟಿಂಗ್ ಮಾಡಿ ಮೊತ್ತವನ್ನು ಹೆಚ್ಚಿಸಿದರು.

ಏಕ್ತಾ ಬಿಶ್ಠ್‌ಗೆ ನಾಲ್ಕು ವಿಕೆಟ್‌: ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಎರಡನೇ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ರನ್ ಗಳಿಕೆಯೂ ಕಡಿಮೆಯಾಯಿತು. 38 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ನಾಯಕಿ ಹಿದರ್ ನೈಟ್‌ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಶೀವರ್‌ 73 ರನ್‌ಗಳ ಜೊತೆಯಾಟ ಆಡಿ ಮಿಥಾಲಿ ಬಳಗದಲ್ಲಿ ಆತಂಕ ಉಂಟುಮಾಡಿದರು. ಈ ಜೊತೆಯಾಟವನ್ನು ಮುರಿದ ಏಕ್ತಾ ಬಿಶ್ಠ್‌ ಒಟ್ಟು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು.

ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರ್ತಿಯರು ಭಾರತದ ಬೌಲರ್‌ಗಳನ್ನು ಎದುರಿಸಲಾಗದೆ ಪರದಾಡಿದರು. ಕೊನೆಯ ಆರು ಮಂದಿ ಎರಡಂಕಿ ಮೊತ್ತ ದಾಟಲಾಗದೆ ಔಟಾದರು.

ಸಂಕ್ಷಿಪ್ತ ಸ್ಕೋರು: ಭಾರತ: 49.4 ಓವರ್‌ಗಳಲ್ಲಿ 202 (ಜೆಮಿಮಾ ರಾಡ್ರಿಗಸ್‌ 48, ಸ್ಮೃತಿ ಮಂದಾನ 24, ಮಿಥಾಲಿ ರಾಜ್ 44, ತನಿಯಾ ಭಾಟಿಯಾ 25, ಜೂಲನ್ ಗೋಸ್ವಾಮಿ 30; ಎಲ್ವಿಸ್‌ 45ಕ್ಕೆ2, ಶೀವರ್‌ 29ಕ್ಕೆ2, ಎಕ್ಲೆಸ್ಟೋನ್‌ 27ಕ್ಕೆ2); ಇಂಗ್ಲೆಂಡ್‌: 41 ಓವರ್‌ಗಳಲ್ಲಿ 136 (ಹಿದರ್ ನೈಟ್ ಅಜೇಯ 39, ಶೀವರ್‌ 44; ಜೂಲನ್ ಗೋಸ್ವಾಮಿ 19ಕ್ಕೆ1, ಶಿಖಾ ಪಾಂಡೆ 21ಕ್ಕೆ2, ಏಕ್ತಾ ಬಿಶ್ಠ್‌ 25ಕ್ಕೆ4, ದೀಪ್ತಿ ಶರ್ಮಾ 33ಕ್ಕೆ2).

ಫಲಿತಾಂಶ: ಭಾರತ ಮಹಿಳೆಯರಿಗೆ 66 ರನ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯದ ಶ್ರೇಷ್ಠ ಆಟಗಾರ್ತಿ: ಏಕ್ತಾ ಬಿಶ್ಠ್‌. ಮುಂದಿನ ಪಂದ್ಯ: ಫೆಬ್ರುವರಿ 25ರಂದು, ಮುಂಬೈಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.