
ಗುವಾಹಟಿ: ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಒಂದೊಮ್ಮೆ ವೈಫಲ್ಯ ಅನುಭವಿಸಿದರೆ ಏನು ಗತಿ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಶುಕ್ರವಾರ ನ್ಯೂಜಿಲೆಂಡ್ ಎದುರು ರಾಯಪುರದಲ್ಲಿ ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಮರಳಿ ಅರಳಿರುವುದೇ ಆ ಉತ್ತರ. ಆದರೆ ಸಂಜು ಸ್ಯಾಮ್ಸನ್ ಅವರು ಲಯಕ್ಕೆ ಮರಳದೇ ಇರುವುದು ಈಗ ಚಿಂತೆಯ ವಿಷಯವಾಗಿದೆ. ಇದರಿಂದಾಗಿ ಸಂಜು ಅವರು ಭಾನುವಾರ ನಡೆಯಲಿರುವ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಕೂಡ ಅನುಮಾನವಾಗಿದೆ. ಈ ಪಂದ್ಯದಲ್ಲಿ ಗೆದ್ದು ಐದು ಪಂದ್ಯಗಳ ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಳ್ಳುವ ಛಲದಲ್ಲಿ ಭಾರತವಿದೆ.
ಇಶಾನ್ ಕಿಶನ್ ಅವರು ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಆಯ್ಕೆಗಾರರು ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮನ ಗೆದ್ದಿದ್ದಾರೆ. ಆದ್ದರಿಂದ ಅವರಿಗೆ ವಿಕೆಟ್‌ಕೀಪಿಂಗ್ ಹೊಣೆಯನ್ನೂ ನೀಡುವ ಸಾಧ್ಯತೆ ಇದೆ. ಬೆಂಚ್‌ನಲ್ಲಿರುವ ಬ್ಯಾಟರ್ ಅಥವಾ ಆಲ್‌ರೌಂಡರ್‌ಗೆ ಸಂಜು ಬದಲಿಗೆ ಸ್ಥಾನ ನೀಡುವುದನ್ನೂ ಅಲ್ಲಗಳೆಯಲಾಗದು.
ಶುಭಮನ್ ಗಿಲ್ ಬದಲಿಗೆ ಸ್ಥಾನ ಪಡೆದಿರುವ ಸಂಜು ಅವರು ತಮಗೆ ಸಿಕ್ಕ ಅವಕಾಶಗಳಲ್ಲಿ ಸಾಮರ್ಥ್ಯ ತೋರಿಲ್ಲ. ಒಂದೊಮ್ಮೆ ಅವರಿಗೆ ಮೂರನೇ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಅವರು ಆಯ್ಕೆಗಾರರ ವಿಶ್ವಾಸ ಉಳಿಸಿಕೊಳ್ಳಲು ರನ್ ಗಳಿಸುವ ಒತ್ತಡವಂತೂ ಇದೆ. ಟಿ20 ವಿಶ್ವಕಪ್ ಟೂರ್ನಿಯ ಪೂರ್ವಭಾವಿ ಅಭ್ಯಾಸದ ವೇದಿಕೆಯೂ ಆಗಿರುವ ಈ ಸರಣಿಯಲ್ಲಿ ಸಂಜು ಅವರು ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಿದೆ. ಅದರೆ ಕಳೆದೆರಡೂ ಪಂದ್ಯಗಳಲ್ಲಿ ಅವರು ಕ್ರಮವಾಗಿ 10 ಮತ್ತು 7 ರನ್ ಗಳಿಸಿದ್ದಾರೆ. ವೇಗದ ಬೌಲಿಂಗ್ ಎದುರು ಆಡುವಲ್ಲಿ ಎಡವಿದ್ದಾರೆ.
ಇಂತಹದೇ ದೀರ್ಘ ಸಮಯದ ವೈಫಲ್ಯ ಅನುಭವಿಸಿದ್ದ ಸೂರ್ಯ ಅವರು ಲಯಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ರಾಯಪುರದ ಮೈದಾನದಲ್ಲಿ ಅವರು ಬ್ಯಾಟ್ ಬೀಸಿದ ರೀತಿಯು ಅಮೋಘವಾಗಿತ್ತು. ಪಾಯಿಂಟ್ ಮತ್ತು ಕವರ್ಸ್‌ನಲ್ಲಿ ಚೆಂಡನ್ನು ಬೌಂಡರಿಗೆ ಕಳಿಸುವ ಅವರ ಪರಿಣತಿ ಗಮನ ಸೆಳೆಯಿತು.
ಬೌಲಿಂಗ್ ವಿಭಾಗದಲ್ಲಿಯಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗಿ ಹರ್ಷಿತ್ ರಾಣಾ ಅವರು ರನ್‌ಗಳನ್ನು ನಿಯಂತ್ರಿಸಿದರು. ಆದರೆ ಅರ್ಷದೀಪ್ ಸಿಂಗ್ ಅವರು ಮೊದಲೆರಡು ಓವರ್‌ಗಳಲ್ಲಿ 36 ರನ್ ಬಿಟ್ಟುಕೊಟ್ಟಿದ್ದು ದುಬಾರಿಯಾದರು. ಜಸ್‌ಪ್ರೀತ್ ಬೂಮ್ರಾ ಅವರು ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಇಲ್ಲಿ ಮರಳುವ ಸಾಧ್ಯತೆ ಇದೆ.
ಏಕದಿನ ಸರಣಿ ಗೆದ್ದು ಸಂಭ್ರಮಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಟಿ20 ಸರಣಿಯಲ್ಲಿ ಜಯದ ಅವಕಾಶ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲೇಬೇಕು.
ಆದರೆ ನ್ಯೂಜಿಲೆಂಡ್ ತಂಡದ ಶಕ್ತಿಯೆಂದರೆ ಉತ್ತಮ ಫೀಲ್ಡಿಂಗ್. ಆದರೆ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ಲೋಪಗಳು ಹೆಚ್ಚಿದ್ದವು. ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಸೂರ್ಯ ಅವರಿಗೆ ಜೀವದಾನ ಲಭಿಸಿದ್ದು ಕಿವೀಸ್‌ಗೆ ದುಬಾರಿಯಾಯಿತು. ಬೌಲಿಂಗ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಉತ್ತಮವಾಗಿರಲಿಲ್ಲ. ಅಭಿಷೇಕ್ ಶರ್ಮಾ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರೂ ಉಳಿದ ಬ್ಯಾಟರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.