ADVERTISEMENT

Test|ನಾಲ್ಕನೇ ದಿನದ ಆರಂಭದಲ್ಲಿ ಭಾರತೀಯ ವೇಗಿಗಳ ಅಬ್ಬರ: ಲಯ ಕಳೆದುಕೊಂಡ ಆಂಗ್ಲರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2025, 13:10 IST
Last Updated 13 ಜುಲೈ 2025, 13:10 IST
   

ಲಾರ್ಡ್ಸ್‌: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆರಂಭದಲ್ಲಿ ಭಾರತೀಯ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದು, ವಿಕೆಟ್‌ ನಷ್ಟವಿಲ್ಲದೇ ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡವು ಊಟದ ವಿರಾಮದ ವೇಳೆಗೆ 25 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಲಷ್ಟೇ ಸಾಧ್ಯವಾಗಿದೆ.

ವಿಕೆಟ್‌ ನಷ್ಟವಿಲ್ಲದೇ ನಾಲ್ಕನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭದಲ್ಲೇ ಬೆನ್‌ ಡಕೆಟ್‌(12 ರನ್) ಹಾಗೂ ಓಲಿ ಪೋಪ್‌(4 ರನ್‌) ವಿಕೆಟ್‌ ಕಬಳಿಸುವ ಮೂಲಕ ವೇಗಿ ಸಿರಾಜ್‌ ಆಘಾತ ನೀಡಿದರು.

ಇದರ ನಂತರವೂ ಕ್ರೀಸ್‌ನಲ್ಲಿ ನೆಲೆಯೂರಲು ಪರದಾಡಿದ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಭಾರತೀಯ ವೇಗಿಗಳು ಕಾಡಿದರು. ಆರಂಭಿಕ ಝಾಕ್ ಕ್ರಾಲಿ 22 ರನ್‌ಗಳಿಸಿ ನಿತೀಶ್ ರೆಡ್ಡಿಗೆ ವಿಕೆಟ್‌ ಒಪ್ಪಿಸಿದರೆ, ಹ್ಯಾರಿ ಬ್ರೂಕ್‌ 23 ರನ್‌ಗಳಿಸಿ ವೇಗಿ ಆಕಾಶ್‌ ದೀಪ್‌ ಎಸೆತದಲ್ಲಿ ಬೌಲ್ಡ್‌ ಆಗುವ ಮೂಲಕ ಪೆವಿಲಿಯನ್‌ ಸೇರಿದರು.

ADVERTISEMENT

ಊಟದ ವಿರಾಮದ ವೇಳೆಗೆ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ಜೋ ರೂಟ್‌ ಕ್ರೀಸ್‌ನಲ್ಲಿದ್ದು, 98 ರನ್‌ಗಳ ಮುನ್ನಡೆಯಲ್ಲಿರುವ ಇಂಗ್ಲೆಂಡ್‌ ತಂಡವು ಭಾರತಕ್ಕೆ ಉತ್ತಮ ಗುರಿ ನೀಡಬೇಕಾದರೆ ಇವರಿಬ್ಬರ ಜೊತೆಯಾಟ ಪ್ರಮುಖವಾಗಲಿದೆ.

ನಾಲ್ಕನೇ ದಿನದ ಊಟದ ವಿರಾಮದ ವೇಳೆಗೆ ಭಾರತದ ಪರ ಸಿರಾಜ್‌ 2 ವಿಕೆಟ್‌ ಕಬಳಿಸಿದರೆ, ಆಕಾಶ್‌ ದೀಪ್‌ ಹಾಗೂ ನಿತೀಶ್‌ ರೆಡ್ಡಿ ಒಂದು ವಿಕೆಟ್‌ ಪಡೆದು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.