ADVERTISEMENT

ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

ಆರ್.ಕೌಶಿಕ್
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
ಟಾಸ್ ಆದ ನಂತರ ಪೆವಿಲಿಯನ್‌ನತ್ತ ತೆರಳುತ್ತಿರುವ ಪಾಕ್ ನಾಯಕ ಸಲ್ಮಾನ್ ಆಘಾ ಮತ್ತು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್
ಟಾಸ್ ಆದ ನಂತರ ಪೆವಿಲಿಯನ್‌ನತ್ತ ತೆರಳುತ್ತಿರುವ ಪಾಕ್ ನಾಯಕ ಸಲ್ಮಾನ್ ಆಘಾ ಮತ್ತು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್   

ದುಬೈ: ಭಾನುವಾರ ರಾತ್ರಿ ನಡೆದ ಪಂದ್ಯ ದಲ್ಲಿ ಭಾರತವು ಪಾಕಿಸ್ತಾನ ತಂಡದ ವಿರುದ್ಧ ಪೂರ್ಣ ಪಾರಮ್ಯ ಮೆರೆಯಿತು. ಆದರೆ ಇದಕ್ಕಿಂತಲೂ ಹೆಚ್ಚಾಗಿ ವ್ಯಾಪಕ ಚರ್ಚೆಗೆ ಗ್ರಾಸವಾದ ಕೆಲವು ಅಂಶಗಳು ಇವೆ. ಅದರಲ್ಲಿ ಪಂದ್ಯಕ್ಕೂ ಮುನ್ನ ಮತ್ತು ನಂತರ ಉಭಯ ನಾಯಕರು ಕೈಕುಲುಕದಿರುವುದು ಮುಖ್ಯವಾಗಿದೆ.  

ಟಾಸ್ ಹಾಕುವ ಸಂದರ್ಭದಲ್ಲಿ ಉಭಯ ತಂಡದ ನಾಯಕರು ಪರಸ್ಪರ ಕೈಕುಲುಕಿ ತಮ್ಮ ತಂಡಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯ. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಸಾಲಾಗಿ ಹೋಗಿ ಕೈಕುಲುಕಿ ಹಾರೈಸುವುದು ವಾಡಿಕೆ. ಪಂದ್ಯದ ಫಲಿತಾಂಶಗಳು ಏನೇ ಆಗಿರಲಿ, ಈ ಪದ್ಧತಿಗಳು ಗೌರವದ ಸಂಕೇತಗಳೂ ಹೌದು. ಕ್ರಿಕೆಟ್‌ನಲ್ಲಿರುವ ಹಲವಾರು ಅಲಿಖಿತ ನಿಯಮಗಳಲ್ಲಿ ಇವು ಕೂಡ ರೂಢಿಗತವಾಗಿವೆ. 

ಕಾಲದಿಂದ ಕಾಲಕ್ಕೆ ಇಂತಹ ಘಟನೆಗಳು ಬೇರೆ ಕ್ರೀಡೆಗಳಲ್ಲಿಯೂ ಕಂಡು ಬಂದಿವೆ. ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಅವರು ರಷ್ಯಾ ದೇಶವು (2022) ತಮ್ಮ ರಾಷ್ಟ್ರದ ಮೇಲೆ ಯುದ್ಧ ಸಾರಿದ್ದನ್ನು ವಿರೋಧಿಸಿದ್ದರು. ಪ್ರತಿಷ್ಠಿತ ಟೂರ್ನಿಗಳಲ್ಲಿ ಅವರು ರಷ್ಯಾ ಮತ್ತು ಅದರ ಮಿತ್ರರಾಷ್ಟ್ರ ಬೆಲಾರೂಸ್‌ನ ಆಟಗಾರ್ತಿಯರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ. 

ADVERTISEMENT

2008ರ ಜೂನ್‌ನಲ್ಲಿ ಓವಲ್ ಮೈದಾನದಲ್ಲಿ ನಡೆದಿದ್ದ ಏಕದಿನ ಪಂದ್ಯ ದಲ್ಲಿ ನ್ಯೂಜಿಲೆಂಡ್ ತಂಡವು ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಶುಭಹಾರೈಸಲು ತಮ್ಮ ಡ್ರೆಸಿಂಗ್ ರೂಮ್‌ನಿಂದ ಹೊರಬರಲು ನಿರಾಕರಿಸಿತ್ತು. ಅದಕ್ಕೆಕಾರಣವೆಂದರೆ ಆ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಗ್ರ್ಯಾಂಟ್ ಎಲಿಯಟ್ ಅವರು ಒಂದು ರನ್‌ಗಾಗಿ ಓಡುವ ಸಂದರ್ಭದಲ್ಲಿ ಇಂಗ್ಲೆಂಡ್ ಬೌಲರ್ ರಿಯಾನ್ ಸೈಡ್‌ಬಾಟಂ ಅವರು ಅಡ್ಡಬಂದು ಡಿಕ್ಕಿ ಹೊಡೆದಿದ್ದರು. ಬಾಟಂ ಮತ್ತು ಗ್ರ್ಯಾಂಟ್ ಇಬ್ಬರೂ ಬಿದ್ದರು. ಆದರೆ ಇಂಗ್ಲೆಂಡ್ ಫೀಲ್ಡರ್‌ಗಳು ಗ್ರ್ಯಾಂಟ್ ಎದ್ದು ಕ್ರೀಸ್‌ ಮುಟ್ಟುವ ಮುನ್ನ ರನ್‌ಔಟ್ ಮಾಡಿದರು. ಇದು ಕ್ರೀಡಾಸ್ಫೂರ್ತಿಯಲ್ಲ ಎಂಬ ನಿಲುವನ್ನು ಕಿವೀಸ್ ವ್ಯಕ್ತಪಡಿಸಿತ್ತು.   

2023ರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ತಮ್ಮ ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್‌ಗೆ ಬರುವುದು ತಡವಾಗಿದ್ದಕ್ಕೆ ‘ಟೈಮ್‌ ಔಟ್’ ಮಾಡಿಸಿದ್ದ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. 

ಕ್ರಿಕೆಟ್ ಅಂಗಳದ ಈ ಎರಡೂ ಉದಾಹರಣೆಗಳು ಆಟದೊಳಗಿನ ಸಂಗತಿ ಗಳಷ್ಟೇ. ಆದರೆ ಭಾರತದ ಆಟಗಾರರು ಪಾಕ್‌ ತಂಡದವರ ಕೈಕುಲುಕದಿರುವುದು ಕ್ರಿಕೆಟ್‌ ಸಂಬಂಧಿತ ವಿಷಯವಲ್ಲ. ಅದು ಈ ವರ್ಷದ ಏ. 22ರಂದು ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಮೇಲೆ ನಡೆದಿದ್ದ ಉಗ್ರರ ದಾಳಿಯನ್ನು ಖಂಡಿಸಿದ ನಡೆಯಾಗಿತ್ತು.  

ಟೂರ್ನಿಗೂ ಮುನ್ನ ನಡೆದಿದ್ದ ಎಲ್ಲ ತಂಡಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಆಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹಸಿನ್ ನಕ್ವಿ ಹಾಗೂ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ ಅವರ ಕೈಕುಲುಕಿದ್ದರು. ಅದಕ್ಕೂ ಹಲವು ಟೀಕೆಗಳು ವ್ಯಕ್ತವಾಗಿ ದ್ದವು.  ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಒತ್ತಾಯಗಳು ಭಾರತದಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದವು. 

ಆದರೆ, ಭಾರತ ಮತ್ತು ಪಾಕ್ ದ್ವಿಪಕ್ಷೀಯ ಸರಣಿಗಳಿಗೆ ಅವಕಾಶವಿಲ್ಲ. ಆದರೆ ಬಹುರಾಷ್ಟ್ರಗಳು ಭಾಗವಹಿಸುವ ಟೂರ್ನಿಯಲ್ಲಿ ಆಡುವುದನ್ನು ತಡೆಯ ಲಾಗುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಸ್ಪಷ್ಟಪಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.