ADVERTISEMENT

Asia Cup | ಕ್ರಿಕೆಟ್ ಮೈದಾನದಲ್ಲಿಯೂ ‘ಆಪರೇಷನ್ ಸಿಂಧೂರ’: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2025, 2:11 IST
Last Updated 29 ಸೆಪ್ಟೆಂಬರ್ 2025, 2:11 IST
   

ನವದೆಹಲಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿರುವ ಭಾರತ ತಂಡಕ್ಕೆ ‘ಆಪರೇಷನ್ ಸಿಂಧೂರ’ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಭಾನುವಾರ(ಸೆ.28) ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐದು ವಿಕೆಟ್‌ಗಳ ಜಯ ಸಾಧಿಸಿತ್ತು.

‘ಕ್ರಿಕೆಟ್ ಮೈದಾನದಲ್ಲಿಯೂ ಆಪರೇಷನ್‌ ಸಿಂಧೂರ. ಫಲಿತಾಂಶ ಒಂದೇ– ಭಾರತಕ್ಕೆ ಜಯ. ಭಾರತ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು’ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

ಏಪ್ರಿಲ್‌ 26ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತ್ತು. ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್‌ ಪ್ರದೇಶಗಳನ್ನು ಗುರಿಯಾಗಿಸಿ ಭಾರತ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಡೆಸಿತ್ತು. ಅದಾದ ಮೂರ್ನಾಲ್ಕು ದಿನಕ್ಕೆ ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು.

ಈ ವಿಚಾರ ಕ್ರಿಕೆಟ್ ಮೈದಾನದಲ್ಲಿಯೂ ಪ್ರತಿಧ್ವನಿಸಿದ್ದು, ಪಂದ್ಯದ ಬಳಿಕ ಪಾಕ್‌ ಆಟಗಾರರಿಗೆ ಹಸ್ತಲಾಘವ ಮಾಡುವುದಕ್ಕೆ ಭಾರತ ನಿರಾಕರಿಸಿತ್ತು. ಫೈನಲ್‌ನಲ್ಲಿ ಗೆದ್ದ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.