ADVERTISEMENT

ಭಾರತ–ಪಾಕಿಸ್ತಾನ ‘ಬ್ಲಾಕ್‌ಬಸ್ಟರ್‌’ ಹೋರಾಟಕ್ಕೆ ವೇದಿಕೆ ಸಜ್ಜು

19 ವರ್ಷದೊಳಗಿನವರ ಏಕದಿನ ವಿಶ್ವಕಪ್‌: ಇಂದು ಸೆಮಿಫೈನಲ್‌ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 19:30 IST
Last Updated 3 ಫೆಬ್ರುವರಿ 2020, 19:30 IST
ಭಾರತ ತಂಡದವರು ಪಾಕಿಸ್ತಾನ ಎದುರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ –ಐಸಿಸಿ ಚಿತ್ರ
ಭಾರತ ತಂಡದವರು ಪಾಕಿಸ್ತಾನ ಎದುರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ –ಐಸಿಸಿ ಚಿತ್ರ   

ಪೊಷೆಫ್‌ಸ್ಟ್ರೂಮ್‌: ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೆಂದರೆ ಅಭಿಮಾನಿಗಳಿಗೆ ಹಬ್ಬ. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಹಣಾಹಣಿಯನ್ನು ಇಡೀ ಕ್ರಿಕೆಟ್‌ ಲೋಕವೇ ಕಣ್ಣರಳಿಸಿ ನೋಡುತ್ತದೆ.

ಮಂಗಳವಾರ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಎದುರಾಗಲಿದ್ದು, ‘ಹೈವೋಲ್ಟೇಜ್‌’ ಹೋರಾಟಕ್ಕೆ ಸೆನ್ವೆಸ್‌ ಪಾರ್ಕ್‌ನಲ್ಲಿ ವೇದಿಕೆ ಸಿದ್ಧಗೊಂಡಿದೆ.

ಭಾರತ ತಂಡವು 2010ರ ನಂತರ ವಿಶ್ವಕಪ್‌ನಲ್ಲಿ ಪಾಕ್‌ ಎದುರು ಸೋತಿಲ್ಲ. ಹೀಗಾಗಿ ಮಂಗಳವಾರದ ಹಣಾಹಣಿಯಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌, ಬ್ಯಾಟಿಂಗ್‌ನಲ್ಲಿ ಭಾರತದ ಬೆನ್ನೆಲುಬಾಗಿದ್ದಾರೆ. ಅಮೋಘ ಲಯದಲ್ಲಿರುವ ಅವರು ನಾಲ್ಕು ಪಂದ್ಯಗಳಿಂದ 103.50 ಸರಾಸರಿಯಲ್ಲಿ 207ರನ್‌ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳೂ ಸೇರಿವೆ.

ಯಶಸ್ವಿ ಅವರನ್ನು ಬೇಗನೆ ಕಟ್ಟಿಹಾಕುವ ಸವಾಲು ಪಾಕ್‌ ಬೌಲರ್‌ಗಳ ಎದುರಿಗಿದ್ದು, ಇದರಲ್ಲಿ ಅವರು ಯಶಸ್ವಿಯಾಗುವರೇ ಎಂಬುದು ಸದ್ಯದ ಕುತೂಹಲ.

ಭಾರತಕ್ಕೆ ತಲೆನೋವಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವಿಭಾಗ. ನಾಯಕ ಪ್ರಿಯಂ ಗರ್ಗ್‌, ದಿವ್ಯಾಂಶ್‌ ಸಕ್ಸೇನಾ, ತಿಲಕ್‌ ವರ್ಮಾ, ವಿಕೆಟ್‌ ಕೀಪರ್‌ ಧ್ರುವ ಜುರೆಲ್‌ ಮತ್ತು ಸಿದ್ದೇಶ್‌ ವೀರ್‌ ಅವರು ಆಸ್ಟ್ರೇಲಿಯಾ ಎದುರಿನ ಕ್ವಾರ್ಟರ್‌ ಫೈನಲ್‌ನಲ್ಲಿ ಬೇಗನೆ ವಿಕೆಟ್‌ ಒಪ್ಪಿಸಿದ್ದರು. ಇವರು ಲಯಕಂಡುಕೊಳ್ಳುವುದು ಅಗತ್ಯ.

ಬೌಲಿಂಗ್‌ನಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಬೌಲರ್‌ಗಳು ಒಟ್ಟು 40 ವಿಕೆಟ್‌ಗಳನ್ನು ಉರುಳಿಸಿರುವುದು ಇದಕ್ಕೆ ಸಾಕ್ಷಿ. ಕಾರ್ತಿಕ್‌ ತ್ಯಾಗಿ, ಅಥರ್ವ ಅಂಕೋಲೆಕರ್‌, ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಮತ್ತು ಆಕಾಶ್‌ ಸಿಂಗ್‌ ಅವರು ಪಾಕ್‌ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಕಾತರರಾಗಿದ್ದಾರೆ.

ಭಾರತದಂತೆ ಪಾಕಿಸ್ತಾನ ಕೂಡ ಈ ಬಾರಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಈ ತಂಡದ ಬೌಲರ್‌ಗಳು ನಾಲ್ಕು ಪಂದ್ಯಗಳಿಂದ 39 ವಿಕೆಟ್‌ ಉರುಳಿಸಿದ್ದಾರೆ. ವೇಗದ ಬೌಲರ್‌ಗಳಾದ ಅಬ್ಬಾಸ್‌ ಅಫ್ರಿದಿ, ಮೊಹಮ್ಮದ್‌ ಅಮೀರ್‌ ಖಾನ್ ಮತ್ತು ತಾಹೀರ್‌ ಹುಸೇನ್‌ ಅವರು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು.

ರೊಹೇಲ್‌ ನಜೀರ್‌ ಬಳಗವು ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿಯಾಗಿ ಆಡಬೇಕು. ಹಾಗಾದಾಗ ಭಾರತವನ್ನು ಮಣಿಸುವ ಈ ತಂಡದ ಕನಸು ಸಾಕಾರಗೊಳ್ಳಬಹುದು.

ಪಂದ್ಯದ ಆರಂಭ: ಮಧ್ಯಾಹ್ನ 1.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.