ಫೋಟೊ ಕೃಪೆ–ಬಿಸಿಸಿಐ
ಮುನೀಬಾ ಅಲಿ ವಿವಾದಿತ ರನೌಟ್
ನವದೆಹಲಿ: ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 2 ಪಂದ್ಯಗಳ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ನಡುವೆ ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟರ್ ಮುನೀಬಾ ಅಲಿ ವಿವಾದಾತ್ಮಕ ರನೌಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಟಾಸ್ ಸಂದರ್ಭದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಾಕಿಸ್ತಾನ ನಾಯಕಿ ಫಾತಿಮ ಸನಾ ಅವರ ಜೊತೆಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದು, ಉಭಯ ತಂಡಗಳ ಆಟದ ರೋಚಕತೆಯನ್ನು ಹೆಚ್ಚಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್ ಮಾಡುವಾಗ ನಾಲ್ಕನೇ ಓವರ್‌ನಲ್ಲಿ ನಡೆದ ರನ್ ಔಟ್ ವಿವಾದವೊಂದು ಕೆಲ ಸಮಯ ಮೈದಾನದಲ್ಲಿನ ಗೊಂದಲಕ್ಕೆ ಕಾರಣವಾಯಿತು.
ಪಾಕಿಸ್ತಾನ ಚೇಸಿಂಗ್ ಮಾಡುವಾಗ 4ನೇ ಓವರ್‌ನಲ್ಲಿ ವೇಗಿ ಕ್ರಾಂತಿ ಗೌಡ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಓವರ್‌ನ ಕೊನೆಯ ಚೆಂಡು ಬ್ಯಾಟರ್ ಮುನೀಬಾ ಅಲಿ ಪ್ಯಾಡ್‌ಗೆ ಬಡಿಯಿತು. ಆಗ ಭಾರತೀಯರು ಎಲ್‌ಬಿಡಬ್ಲ್ಯೂ ನೀಡುವಂತೆ ಅಂಪೈರ್‌ಗೆ ಮನವಿ ಮಾಡಿದರು. ಆದರೆ, ಅಂಪೈರ್ ಭಾರತೀಯರ ಮನವಿಯನ್ನು ನಿರಾಕರಿಸಿದರು. ಒಂದೆಡೆ ಮನವಿ ಮಾಡುತ್ತಿದ್ದಾಗಲೆ ಫಿಲ್ಡಿಂಗ್ ಮಾಡುತ್ತಿದ್ದ ದೀಪ್ತಿ ಶರ್ಮಾ ಡೈರೆಕ್ಟ್ ಥ್ರೋ ಮೂಲಕ ಬಾಲ್ ಅನ್ನು ಸ್ಟಂಪ್‌ಗೆ ಹೊಡೆಯುತ್ತಾರೆ.
ಈ ನಡುವೆ ವಿಕೆಟ್ ಕೀಪರ್ ರಿಚಾ ಘೋಷ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಎಲ್‌ಬಿಡಬ್ಲ್ಯೂ ಔಟ್ ನೀಡುವ ಕುರಿತು ಮೂರನೇ ಅಂಪೈರ್ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸುತ್ತಾರೆ. ಆದರೆ, ಅದಾಗಲೇ ಒಂದು ರಿವ್ಯೂ ಕಳೆದುಕೊಂಡಿದ್ದ ಟೀಂ ಇಂಡಿಯಾ ಈ ನಿರ್ಧಾರಕ್ಕೆ ಹೋಗದಿರಲು ನಿರ್ಧರಿಸುತ್ತದೆ.
ಆಗ ಅಂಪೈರ್ ಸ್ವಯಂಪ್ರೇರಿತರಾಗಿ ದೀಪ್ತಿ ಹೊಡೆದ ಡೈರೆಕ್ಟ್ ಥ್ರೋ ಚೆಕ್ ಮಾಡಲು ಮೂರನೇ ಅಂಪೈರ್‌ಗೆ ಮನವಿ ಮಾಡುತ್ತಾರೆ. ಸೂಕ್ಷ್ಮವಾಗಿ ಗಮನಿಸಿದ ಮೂರನೇ ಅಂಪೈರ್ ದೊಡ್ಡ ಪರದೆಯ ಮೇಲೆ ನಾಟೌಟ್ ಎಂದು ತೀರ್ಪು ನೀಡುತ್ತಾರೆ. ಆಗ ಭಾರತದ ಆಟಗಾರ್ತಿಯರು ಮತ್ತೆ ಪಂದ್ಯಕ್ಕೆ ವಾಪಾಸ್ಸಾಗಲು ಮುಂದಾದಾಗ, ಮತ್ತೊಮ್ಮೆ ತೀರ್ಪು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ಮರು ತೀರ್ಪು ನೀಡುತ್ತಾರೆ.
ಅಂದಹಾಗೆ, ದೀಪ್ತಿ ಶರ್ಮಾ ಎಸೆದ ಚೆಂಡು ಸ್ಟಂಪ್‌ಗೆ ಬಡಿಯುವ ಸಂದರ್ಭದಲ್ಲಿ ಮುನೀಬಾ ಅಲಿ ಬ್ಯಾಟ್ ಗಾಳಿಯಲ್ಲಿರುವುದು ಸ್ಪಷ್ಟವಾಗಿತ್ತು. ಆದರೆ, ಅದಕ್ಕೂ ಮೊದಲು ಅವರು ಒಮ್ಮೆ ಕ್ರೀಸ್ ಒಳಗೆ ಬ್ಯಾಟ್ ಇಟ್ಟಿರುತ್ತಾರೆ. ಅದನ್ನು ಗಮನಿಸಿದ ಮೂರನೇ ಅಂಪೈರ್ ಮೊದಲು ನಾಟೌಟ್ ತೀರ್ಪು ನೀಡುತ್ತಾರೆ. ಬಳಿಕ, ಮುನಿಬಾ ಬ್ಯಾಟ್ ಗಾಳಿಯಲ್ಲಿರುವುದನ್ನು ಗಮನಿಸಿ ಔಟ್ ಎಂದು ತೀರ್ಪು ನೀಡುತ್ತಾರೆ.
ಕೂಡಲೇ ಪಾಕಿಸ್ತಾನ ನಾಯಕಿ ಫಾತಿಮಾ ಮೈದಾನಕ್ಕೆ ಬಂದು 4ನೇ ಅಂಪೈರ್ ಜೊತೆ ಚರ್ಚೆಗೆ ಮುಂದಾಗುತ್ತಾರೆ. ಈ ವೇಳೆ ಕೆಲ ಸಮಯ ಪಂದ್ಯ ಸ್ಥಗಿತಗೊಳ್ಳುತ್ತದೆ. ಮುನೀಬಾ ಕೂಡ ಬೌಂಡರಿ ಲೈನ್ ಬಳಿಯೇ ನಿಂತಿರುತ್ತಾರೆ. ಅಂತಿಮವಾಗಿ, ಮುನೀಬಾ ಅವರನ್ನು ಔಟ್ ಎಂದು ಘೋಷಿಸಲಾಯಿತು.
ಐಸಿಸಿ ನಿಯಮ ಹೇಳೋದೇನು?
ಆಟದ ಷರತ್ತುಗಳ ನಿಯಮ 30 ರ ಪ್ರಕಾರ, ಬ್ಯಾಟರ್ ಓಡದೆ ಅಥವಾ ಡೈವ್ ಮಾಡದೆ ಇದ್ದಾಗ, ಬಾಲ್ ಸ್ಟಂಪ್‌ಗೆ ಬಡಿಯುವ ಸಂದರ್ಭದಲ್ಲಿ ಆಟಗಾರರ ಬ್ಯಾಟ್ ಗಾಳಿಯಲ್ಲಿದ್ದರೆ ಅವರನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.