ADVERTISEMENT

ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಪಿ.ಎಂ ಇಲೆವೆನ್ ವಿರುದ್ಧ ಭಾರತ ಅಭ್ಯಾಸ ಪಂದ್ಯ

ಪಿಟಿಐ
Published 30 ನವೆಂಬರ್ 2024, 0:56 IST
Last Updated 30 ನವೆಂಬರ್ 2024, 0:56 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

– ಪಿಟಿಐ ಚಿತ್ರ

ಕ್ಯಾನ್‌ಬೆರಾ: ಭಾರತ ತಂಡವು ಶನಿವಾರದಿಂದ ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಪ್ರೈಮ್‌ ಮಿನಿಸ್ಟರ್ಸ್‌ ಇಲೆವೆನ್‌ ಎದುರು ಎರಡು ದಿನಗಳ ‘ಪಿಂಕ್‌ಬಾಲ್‌’ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯವು ಎರಡನೇ ಟೆಸ್ಟ್‌ಗೆ ಬ್ಯಾಟಿಂಗ್ ಕ್ರಮಾಂಕ ಸಂಯೋಜನೆಗೆ ಸ್ಪಷ್ಟತೆ ಪಡೆಯಲು ನೆರವಾಗಲಿದೆ.

ADVERTISEMENT

ಭಾರತ ಇದುವರೆಗೆ ನಾಲ್ಕು ಹಗಲು ರಾತ್ರಿ (ಪಿಂಕ್‌ಬಾಲ್‌) ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಇದರಲ್ಲಿ ಏಕೈಕ ಸೋಲು ನಾಲ್ಕು ವರ್ಷಗಳ ಹಿಂದೆ ಆಡಿಲೇಡ್‌ನಲ್ಲಿ ಬಂದಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 36 ರನ್‌ಗಳಿಗೆ ಆಲೌಟ್‌ ಆಗಿತ್ತು. ಆದರೆ ಆ ಪಂದ್ಯದ ಬಳಿಕ ಚೇತರಿಸಿಕೊಂಡು ನಾಲ್ಕು ಟೆಸ್ಟ್‌ಗಳ ಸರಣಿ ಗೆದ್ದುಕೊಂಡಿತ್ತು.

ಕೆಂಬಣ್ಣದ ಚೆಂಡಿಗೆ ಹೋಲಿಸಿದರೆ, ಗುಲಾಬಿ ಬಣ್ಣದ ಚೆಂಡು ಸ್ವಲ್ಪ ಹೆಚ್ಚು ಕರಾಮತ್ತು ತೋರುತ್ತದೆ. ವಿಶೇಷವಾಗಿ ಇಳಿಸಂಜೆಯ ವೇಳೆ. ಇದು ಮೊದಲ ದರ್ಜೆ ಪಂದ್ಯ ಆಗಿಲ್ಲದ ಕಾರಣ ಭಾರತದ ಬಹುತೇಕ ಆಟಗಾರರು ಈ ಪಂದ್ಯವನ್ನು ‘ನೈಜ ಪಂದ್ಯದ ಅನುಭವ’ ದಕ್ಕಿಸಿಕೊಳ್ಳುವ ಉದ್ದೇಶದಿಂದ ಆಡಲಿದ್ದಾರೆ.

ಪರ್ತ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಗೆದ್ದ ನಂತರ ಭಾರತ ತಂಡದ ಮನೋಸ್ಥೈರ್ಯ ವೃದ್ಧಿಸಿದೆ.

ಎರಡನೇ ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿ ಮೊದಲ ಟೆಸ್ಟ್‌ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಈಗ ತಂಡಕ್ಕೆ ಮರಳಿದ್ದಾರೆ. ಅಂತೆಯೇ ಫಿಟ್‌ ಆಗಿರುವ ಶುಭಮನ್ ಗಿಲ್ ಕೂಡ. ಹೀಗಾಗಿ ಡಿಸೆಂಬರ್ 6ರಂದು ಆಡಿಲೇಡ್‌ನಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ಗೆ ತಂಡದ ಬ್ಯಾಟಿಂಗ್ ಕ್ರಮಾಂಕ ಬದಲಾಗಲಿದೆ.ರೋಹಿತ್‌ ಮತ್ತು ಜೈಸ್ವಾಲ್ ಅವರು ತಂಡದ ಆರಂಭ ಆಟಗಾರಾಗಿ ಆಡಬೇಕಾಗಿತ್ತು. ಆದರೆ ಪರ್ತ್‌ನಲ್ಲಿ ರೋಹಿತ್ ಅಲಭ್ಯರಾದ ಕಾರಣ ಕೆ.ಎಲ್‌.ರಾಹುಲ್ ಇನಿಂಗ್ಸ್ ಆರಂಭಿಸಿ ಉತ್ತಮ ಆಟವನ್ನೂ ಆಡಿದ್ದರು. ರೋಹಿತ್ ಆರಂಭ ಆಟಗಾರ ನಾಗುತ್ತಾರೆಯೇ ಅಥವಾ ಮಧ್ಯಮ ಕ್ರಮಾಂಕಕ್ಕೆ ಇಳಿಯಬಹುದೇ ಎನ್ನುವುದು ಖಚಿತವಾಗಿಲ್ಲ. ಗಿಲ್‌ ಅವರ ಕ್ರಮಾಂಕವೂ ಬದಲಾಗಲಿದೆ.

ಹೀಗಾಗಿ ಕ್ರಮಾಂಕ ಸಂಯೋಜನೆಗೆ ಸ್ಪಷ್ಟತೆ ನೀಡಲು ಈ ಪಂದ್ಯ ಅವಕಾಶ ಒದಗಿಸಿದೆ. ಇದು ಎರಡು ದಿನಗಳ ಪಂದ್ಯವಾಗಿರುವ ಕಾರಣ ಭಾರತ ಬೌಲಿಂಗ್‌ಗಿಂತ ಬ್ಯಾಟಿಂಗ್‌ಗೆ ಹೆಚ್ಚು ಅವಕಾಶ ಸಿಗಬಹುದೆನ್ನುವ ವಿಶ್ವಾಸ ಹೊಂದಿದೆ. ಟೆಸ್ಟ್‌ ಆಡುವ ಸಾಧ್ಯತೆ ದೂರವಾಗಿರುವ ಕಾರಣ ಸರ್ಫರಾಜ್ ಖಾನ್ ಇಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.ಟೆಸ್ಟ್‌ ಆಟಗಾರರಾದ ಮ್ಯಾಟ್‌ ರೆನ್‌ಶಾ ಮತ್ತು ಸ್ಕಾಟ್‌ ಬೋಲ್ಯಾಂಡ್ ಎದುರಾಳಿ ತಂಡದಲ್ಲಿದ್ದು ಪಂದ್ಯಕ್ಕೆ ತಾಲೀಮು ಸಿಗಬಹುದೆಂಬ ವಿಶ್ವಾಸ ಭಾರತ ತಂಡದ್ದು. ಪ್ರೈಮ್‌ ಮಿನಿಸ್ಟರ್ಸ್‌ ತಂಡದ ನಾಯಕತ್ವವನ್ನು ಆಲ್‌ರೌಂಡರ್‌ ಜಾಕ್‌ ಎಡ್ವರ್ಡ್ಸ್‌ ವಹಿಸಿದ್ದು, 19 ವರ್ಷದೊಳಗಿನವ ತಂಡದ ತಾರೆಗಳಾದ ಚಾರ್ಲಿ ಆ್ಯಂಡರ್ಸನ್‌, ಮಹ್ಲಿ ಬಿಯರ್ಡ್‌ಮನ್‌, ಏಡನ್ ಓ‘ಕಾನರ್ ಮತ್ತು ಸ್ಯಾಮ್ ಕೊನ್‌ಸ್ಟಾಸ್ ಆಡಲಿದ್ದಾರೆ.

‘ರಾಹುಲ್ ಮತ್ತೆ ಇನಿಂಗ್ಸ್ ಆರಂಭಿಸಲಿ’

ಕ್ಯಾನ್‌ಬೆರಾ (ಪಿಟಿಐ): ನಾಯಕ ರೋಹಿತ್‌ ಶರ್ಮಾ ಅವರು ತಂಡಕ್ಕೆ ಮರಳಿದರೂ, ಕೆ.ಎಲ್‌.ರಾಹುಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲಿ ಎಂದು ಹಿರಿಯ ಆಟಗಾರ ಚೇತೇಶ್ವರ ಪೂಜಾರ ಸಲಹೆ ನೀಡಿದ್ದಾರೆ.ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್‌ ಅವರ ಗೈರುಹಾಜರಿಯಲ್ಲಿ ರಾಹುಲ್ ಅವರು ಜೈಸ್ವಾಲ್ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದರು. ಭಾರತ 295 ರನ್‌ಗಳ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಕಾರಣ ಆರಂಭ ಆಟಗಾರರ ಸಂಯೋಜನೆ ಬದಲಿಸಬಾರದು ಎಂದು ಈ ಹಿಂದೆ ಭಾರತದ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದ ಪೂಜಾರ ಹೇಳಿದ್ದಾರೆ. ‘ಇವರಿಬ್ಬರು ಇನಿಂಗ್ಸ್ ಆರಂಭಿಸಿದಲ್ಲಿ, ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಮತ್ತು ಶುಭಮನ್ ಗಿಲ್ ಐದನೇ ಕ್ರಮಾಂಕದಲ್ಲಿ ಆಡಬಹುದು’ ಎಂದು ಇಎಸ್‌ಪಿಎನ್‌ ಜೊತೆಗಿನ ಸಂವಾದದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಸ್‌ನಲ್ಲಿ ಗಿಲ್‌ ಭಾಗಿ

ಕ್ಯಾನ್‌ಬೆರಾ (ಪಿಟಿಐ): ಶುಭಮನ್ ಗಿಲ್‌ ಅವರು ಶುಕ್ರವಾರ ಭಾರತ ತಂಡದ ನೆಟ್ಸ್‌ ಅಭ್ಯಾಸದಲ್ಲಿ ಸಕ್ರಿಯವಾಗಿ ಭಾಗಿಯಾದರು. ಇದು ಹೆಬ್ಬೆರಳಿನ ಗಾಯದಿಂದ ಅವರು ಚೇತರಿಸಿಕೊಂಡಿರುವುದರ ಸಂಕೇತವಾಗಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಗಿಲ್‌ ಆಡಿರಲಿಲ್ಲ. ಆದರೆ ಈ ಹಿಂದಿನ ಪ್ರವಾಸದಲ್ಲಿ ಅವರ ಸ್ಫೂರ್ತಿಯುತ ಪ್ರದರ್ಶನದ ಕಾರಣ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಉಳಿದ ಪಂದ್ಯಗಳಲ್ಲಿ ಅವರನ್ನು ತಂಡದ ಆಡಳಿತವು ಆಡಿಸುವುದು ಖಚಿತವಾಗಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.10

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.