
ಟಿ20 ವಿಶ್ವಕಪ್ ಟ್ರೋಫಿ ಹಾಗೂ ಭಾರತ ಕ್ರಿಕೆಟ್ ತಂಡ
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವಕಪ್ 2026ರ ಸೂಪರ್–8 ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ವಿಶೇಷ ಅಂದರೆ, ಈ ಪಂದ್ಯವು ಭಾರತದ ಸೆಮಿಫೈನಲ್ ಪ್ರವೇಶದ ಹಾದಿಯನ್ನು ಬಹುತೇಕ ನಿರ್ಧರಿಸಲಿದೆ.
ಭಾರತ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ದ.ಆಫ್ರಿಕಾ
ಟೂರ್ನಿಯ ಬಲಿಷ್ಠ ತಂಡವಾಗಿರುವ ಭಾರತ ತಂಡವನ್ನು ಸೂಪರ್–8ರ ಪಂದ್ಯದಲ್ಲಿ ಸೋಲಿಸಿರುವ ದಕ್ಷಿಣ ಆಫ್ರಿಕಾ ತಂಡವು ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಕೂಡ ಜಿಂಬಾಂಬ್ವೆ ತಂಡವನ್ನು ಬೃಹತ್ ಅಂತರದಲ್ಲಿ ಸೋಲಿಸಿ, ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತದ ಸೆಮಿಫೈನಲ್ ಮೇಲೆ ಪರಿಣಾಮ
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಸರಣಿಯಿಂದ ಹೊರಬೀಳುವ ಆತಂಕದಲ್ಲಿರುವ ಭಾರತ ತಂಡವು ಇಂದು (ಗುರುವಾರ) ನಡೆಯುತ್ತಿರುವ ವಿಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಇಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದರೆ ಭಾರತ ಸೆಮಿಫೈನಲ್ ತಲುಪುವ ಹಾದಿ ಜೀವಂತವಾಗಿರಲಿದೆ.
ಒಂದುವೇಳೆ, ಇಂದು ವೆಸ್ಟ್ ಇಂಡೀಸ್ ತಂಡ ಗೆದ್ದರೆ, ಭಾರತ ತಂಡದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ.
ಸೆಮಿಫೈನಲ್ ತಲುಪಲು ಭಾರತಕ್ಕಿರುವ ಅವಕಾಶಗಳು
ಮೊದಲನೆಯದಾಗಿ ಭಾರತ ತಂಡವು ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವುದು
ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಗೆದ್ದರೆ, ಭಾರತ ಮುಂದಿನ ಎರಡೂ ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲಬೇಕು
ಇಂದು ವೆಸ್ಟ್ ಇಂಡೀಸ್ ಸೋತರೆ, ಭಾರತ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಬೇಕು
ಒಟ್ಟಾರೆಯಾಗಿ ಭಾರತ ತಂಡವು ಜಿಂಬಾಂಬ್ವೆ ತಂಡದ ವಿರುದ್ಧ ಆಡಲು ಹೋಗುವುದಕ್ಕೆ ಮೊದಲು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯವು ಭಾರತದ ಸೆಮಿಫೈನಲ್ ಹಾದಿಯನ್ನು ಇತ್ಯರ್ಥಗೊಳಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.