ವಿಕೆಟ್ ತೆಗೆದ ಸಂಭ್ರಮದಲ್ಲಿ ದ.ಆಫ್ರಿಕಾ ಆಟಗಾರರು
ಚಿತ್ರ: @kollytired
ಗುವಾಹಟಿ: ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ 2–0 ಅಂತರದಲ್ಲಿ ಸರಣಿ ಗೆದ್ದು ಟೀಂ ಇಂಡಿಯಾಗೆ ತವರಿನಲ್ಲೇ ಆಘಾತ ನೀಡಿತು.
ದಕ್ಷಿಣ ಆಫ್ರಿಕಾ ನೀಡಿದ್ದ 549 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ ಕೇವಲ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ 408 ರನ್‌ಗಳ ಬೃಹತ್ ಅಂತರದ ಸೋಲು ಕಂಡಿದೆ.
4ನೇ ದಿನದಾಟದಲ್ಲಿ 27 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ, ಇಂದು 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜ 54 ರನ್ ಗಳಿಸಿ, ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ ಪರ ಅಮೋಘ ಬೌಲಿಂಗ್ ಪ್ರದರ್ಶಿಸಿದ ಸೈಮನ್ ಹಾರ್ಮರ್ 6 ವಿಕೆಟ್ ಪಡೆದು ಮಿಂಚಿದರು. ಕೇಶವ್ ಮಹಾರಜ್ 2, ಮಾರ್ಕೊ ಜಾನ್ಸನ್ ಹಾಗೂ ಸೆನುರಾನ್ ಮುತುಸಾಮಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಮೊದಲ ಇನಿಂಗ್ಸ್‌ನಲ್ಲಿ 288 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 260/5 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಭಾರತ ಗೆಲುವಿಗೆ 549ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ದಕ್ಷಿಣ ಆಫ್ರಿಕಾ ಪರ ಎರಡನೇ ಇನಿಂಗ್ಸ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ (94) ಹಾಗೂ ಟೋನಿ ಡಿ ಝೊರ್ಜಿ (49) ರನ್ ಗಳಿಸಿದರು. ಆಲ್‌ರೌಂಡರ್ ವಿಯಾನ್ ಮುಲ್ಡರ್ ಕೂಡ (ಅಜೇಯ 35) ರನ್ ಗಳಿಸಿದ್ದರು.
ಒಟ್ಟಾರೆ ಭಾರತ ತಂಡ 408 ರನ್‌ಗಳ ಬೃಹತ್ ಅಂತರದ ಸೋಲು ಕಂಡಿದೆ. ಹಾಗೂ ದಕ್ಷಿಣ ಆಫ್ರಿಕಾ ತಂಡ ಬರೋಬ್ಬರಿ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.