ADVERTISEMENT

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ: ಪಡಿಕ್ಕಲ್, ಜಗದೀಶನ್‌ಗೆ ಅವಕಾಶ

ಪಿಟಿಐ
Published 25 ಸೆಪ್ಟೆಂಬರ್ 2025, 7:53 IST
Last Updated 25 ಸೆಪ್ಟೆಂಬರ್ 2025, 7:53 IST
   

ದುಬೈ: ಕರ್ನಾಟಕದ ಅನುಭವಿ ಬ್ಯಾಟರ್‌ ದೇವದತ್ತ ಪಡಿಕ್ಕಲ್‌, ವೆಸ್ಟ್‌ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್‌ಗಳ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಆಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕರುಣ್ ನಾಯರ್‌ ಅವರನ್ನು ಕೈಬಿಡಲಾಗಿದೆ.

ಭಾರತ ತಂಡದ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಗುರುವಾರ 15 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು. ವೆಸ್ಟ್‌ ಇಂಡೀಸ್ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಅಕ್ಟೋಬರ್‌ 2ರಂದು ಅಹಮದಾಬಾದಿನಲ್ಲಿ ಆರಂಭವಾಗಲಿದೆ.

ರಿಷಭ್ ಪಂತ್ ಅವರು ಬಲಪಾದದ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲದ ಕಾರಣ ರವೀಂದ್ರ ಜಡೇಜಾ ಅವರಿಗೆ ಉಪ ನಾಯಕ ಸ್ಥಾನ ವಹಿಸಲಾಗಿದೆ. 

ADVERTISEMENT

ನಾಯರ್ ಜೊತೆಗೆ ಇಂಗ್ಲೆಂಡ್ ವಿರುದ್ಧದ ತಂಡದಲ್ಲಿದ್ದ ಬಂಗಾಳದ ಆರಂಭ ಆಟಗಾರ  ಅಭಿಮನ್ಯು ಈಶ್ವರನ್ ಅವರಿಗೆ ಇನ್ನು ಅವಕಾಶವಿರುವುದಿಲ್ಲವೆಂಬ ಸುಳಿವು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರಕರ್‌ ಅವರ ಮಾತುಗಳಲ್ಲಿ ವ್ಯಕ್ತವಾಯಿತು.

25 ವರ್ಷ ವಯಸ್ಸಿನ ಎಡಗೈ ಬ್ಯಾಟರ್ ಪಡಿಕ್ಕಲ್‌ ದೇಶಿಯ ಟೂರ್ನಿಗಳಲ್ಲಿ ತೋರಿದ ಉತ್ತಮ  ಆಟದಿಂದ ಸ್ಥಾನ ಪಡೆದಿದ್ದಾರೆ.

ವೇಗದ ಬೌಲರ್‌ ಬೂಮ್ರಾ ಅವರಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದ್ದು, ಅವರು ಎರಡೂ ಪಂದ್ಯಗಳಲ್ಲಿ ಆಡಲಿದ್ದಾರೆ ಎಂಬ ಇಂಗಿತ ಅಗರಕರ್ ಮಾತಿನಲ್ಲಿ ವ್ಯಕ್ತವಾಯಿತು. ‘ಎರಡೂ ಟೆಸ್ಟ್‌ ಪಂದ್ಯಗಳಿಗೆ ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರು ಎರಡೂ ಪಂದ್ಯಗಳಿಗೆ ಲಭ್ಯರಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯ ನಂತರ ಸಾಕಷ್ಟು ವಿರಾಮ ದೊರತಿದೆ. ಅವರು ಆ ಸರಣಿಯ ಐದನೇ ಟೆಸ್ಟ್‌ ಬೇರೆ ಆಡಿರಲಿಲ್ಲ. ಅವರಿಗೆ ಐದು ವಾರಗಳ ಬಿಡುವು ಸಿಕ್ಕಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಬೂಮ್ರಾ ಸಹ  ಸಜ್ಜಾಗಿದ್ದು, ಎರಡೂ ಟೆಸ್ಟ್‌ಗಳಲ್ಲಿ ಆಡಲು ಉತ್ಸುಕರಾಗಿದ್ದಾರೆ’ ಎಂದರು.

33 ವರ್ಷ ವಯಸ್ಸಿನ ನಾಯರ್‌ ಬಗ್ಗೆ ಪ್ರಸ್ತಾಪಿಸಿದ ಅಗರಕರ್‌, ತಮಗೆ ದೊರೆತ ಅವಕಾಶಗಳನ್ನು ಅವರು ಪೂರ್ಣವಾಗಿ ಬಳಸಿಕೊಳ್ಳಲಿಲ್ಲ. ಇಂಗ್ಲೆಂಡ್ ಪ್ರವಾಸದ ಎಂಟು ಇನಿಂಗ್ಸ್‌ಗಳಲ್ಲಿ ಒಂದು ಅರ್ಧ ಶತಕ ಮಾತ್ರ ಗಳಿಸಿದರು ಎಂದು ವಿವರಿಸಿದರು.

‘ಈ ಹಂತದಲ್ಲಿ ಪಡಿಕ್ಕಲ್‌ ಅವರಿಂದ ಹೆಚ್ಚಿನ ಕೊಡುಗೆ ಸಿಗಬಹುದು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರು ಟೆಸ್ಟ್‌ ತಂಡದಲ್ಲಿದ್ದರು. ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ಆಡುವ ಅವಕಾಶ ದೊರೆತಾಗ ಅವರು ಅರ್ಧ ಶತಕ ಸಹ ಹೊಡೆದಿದ್ದರು. ಈ ರೇಸ್‌ನಲ್ಲಿ ಅವರು ಯೋಗ್ಯ ರೀತಿಯಲ್ಲಿ ಆಡಿದ್ದಾರೆ’ ಎಂದು ಭಾರತ ತಂಡದ ಮಾಜಿ ವೇಗಿ ತಿಳಿಸಿದರು.

ಕಳೆದ 3–4 ವರ್ಷಗಳಿಂದ ತಂಡದಲ್ಲಿದ್ದರೂ ಈಶ್ವರನ್ ಆಡುವ ಪದಾರ್ಪಣೆ ಅವಕಾಶ ಸಿಕ್ಕಿರಲಿಲ್ಲ. ಈಗ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ. 

‘ರಿಷಭ್ ಪಂತ್‌ ಅವರು ತಂಡದ ಪ್ರಮುಖ ಆಟಗಾರ. ದುರದೃಷ್ಟವಶಾತ್ ಅವರು ಇನ್ನೂ ಪೂರ್ಣವಾಗಿ ಚೇತರಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಲಭ್ಯರಾಗುವ ವಿಶ್ವಾಸವಿದೆ’ ಎಂದರು.

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿ ನವೆಂಬರ್‌ 14 ರಿಂದ 26ರ ಅವಧಿಯಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯೂ ಇದೆ. ಡಿ. 19ರಂದು ಕೊನೆಯ ಟಿ20 ಪಂದ್ಯ ನಡೆಯಲಿದೆ.

ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ‘ಅವರು ಎಷ್ಟರ ಮಟ್ಟಿಗೆ ಫಿಟ್‌ ಆಗಿದ್ದಾರೆ ಎಂಬ ಬಗ್ಗೆ ಹೆಚ್ಚು ತಿಳಿದಿಲ್ಲ’ ಎಂದರು. ಅವರಿಗೆ ಇನ್ನು ಅವಕಾಶ ಕಷ್ಟ ಎನ್ನುವ ಇಂಗಿತವನ್ನೂ ನೀಡಿದರು.

ತಂಡ ಇಂತಿದೆ:

ಶುಭಮನ್ ಗಿಲ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್‌, ಸಾಯಿ ಸುದರ್ಶನ್‌, ದೇವದತ್ತ ಪಡಿಕ್ಕಲ್‌, ಧ್ರುವ್‌ ಜುರೇಲ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ (ಉಪ ನಾಯಕ), ವಾಷಿಂಗ್ಟನ್ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಅಕ್ಷರ್‌ ಪಟೇಲ್‌, ನಿತೀಶ್‌ ಕುಮಾರ್‌ ರೆಡ್ಡಿ, ಎನ್‌.ಜಗದೀಶನ್ (ವಿಕೆಟ್‌ ಕೀಪರ್‌), ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.