ADVERTISEMENT

ಕೊಹ್ಲಿ, ಆರ್‌ಸಿಬಿಗೆ ಶ್ರೇಯ ಸಲ್ಲಬೇಕು; ಸಿರಾಜ್ ಯಶಸ್ಸಿಗೆ ಸೋದರನ ಮಾತು

ಏಜೆನ್ಸೀಸ್
Published 20 ಜನವರಿ 2021, 4:40 IST
Last Updated 20 ಜನವರಿ 2021, 4:40 IST
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್   

ಹೈದರಾಬಾದ್: ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಯಶಸ್ಸಿಗಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಶ್ರೇಯ ಸಲ್ಲಬೇಕು ಎಂದು ಸಿರಾಜ್ ಸಹೋದರ ಮೊಹಮ್ಮದ್ ಇಸ್ಮಾಯಿಲ್ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲೂ ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದರೊಂದಿಗೆ ಗಾಬಾ ಭದ್ರಕೋಟೆಯಲ್ಲಿ 33 ವರ್ಷಗಳಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಸೋಲನುಭವಿಸಿದೆ.

ಪಿತೃ ವಿಯೋಗದ ದುಃಖದ ಸನ್ನಿವೇಶದಲ್ಲಿ ಟೀಮ್ ಇಂಡಿಯಾ ಪರ ಆಡಲು ಉತ್ಸುಕತೆ ತೋರಿದ ಸಿರಾಜ್‌ಗೆ ಜನಾಂಗೀಯ ನಿಂದನೆಯಂತಹ ಕೆಟ್ಟ ಅನುಭವ ಎದುರಾಗಿತ್ತು. ಆದರೂ ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸಿರಾಜ್, ಬ್ರಿಸ್ಬೇರ್ನ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದರು.

ADVERTISEMENT

ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು 13 ವಿಕೆಟ್ ಕಬಳಿಸಿರುವ ಮೊಹಮ್ಮದ್ ಸಿರಾಜ್ ಕಠಿಣ ಪರಿಶ್ರಮ ಕೊನೆಗೂ ಫಲಶ್ರುತಿ ಕಂಡಿದೆ.

'ಮೊಹಮ್ಮದ್ ಸಿರಾಜ್ ಅದ್ಭುತ ಸಾಧನೆಯೊಂದಿಗೆ ಇಡೀ ಕುಟುಂಬ ಹಾಗೂ ದೇಶ ಹೆಮ್ಮೆಪಡುವಂತೆ ಮಾಡಿದರು. ಇದು ನಮ್ಮಲ್ಲಿ ಅತ್ಯುತ್ತಮ ಭಾವನೆ ತಂದಿದೆ. ನಿಸ್ಸಂಶಯವಾಗಿಯೂ ತಂದೆಯ ಅಗಲಿಕೆ ದೊಡ್ಡ ನಷ್ಟ. ಆ ನಷ್ಟವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಈ ನೋವನ್ನು ನಿವಾರಿಸುವಲ್ಲಿ ನಮ್ಮ ತಾಯಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸಿರಾಜ್ ಅವರೊಂದಿಗೆ ಪ್ರತಿದಿನ ಎರಡು-ಮೂರು ತಾಸುಗಳ ಕಾಲ ಮಾತನಾಡಿ ಹುರಿದುಂಬಿಸುತ್ತಿದ್ದರು. ಅವರಿಂದಾಗಿ ಮಾತ್ರವೇ ಸಿರಾಜ್ ಎಲ್ಲ ತೊಂದರೆಗಳನ್ನು ನಿಭಾಯಿಸಲು ಸಾಧ್ಯವಾಯಿತು' ಎಂದು ವಿವರಿಸಿದರು.

'ಸಿರಾಜ್ ಐದು ವಿಕೆಟ್ ಪಡೆಯುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಮ್ಯಾಚ್ ವಿನ್ನಿಂಗ್ ಪ್ರದರ್ಶನ. ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಅವರಂತಹ ದೊಡ್ಡ ಆಟಗಾರರಿಲ್ಲದೆ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸುವುದು ದೊಡ್ಡ ಸಾಧನೆಯಾಗಿದೆ. ಫಿಟ್ನೆಸ್ ಹಾಗೂ ಬೌಲಿಂಗ್‌ನಲ್ಲಿ ಅವರು ತುಂಬಾ ಪರಿಶ್ರಮ ವಹಿಸಿದ್ದಾರೆ. ಉತ್ತಮ ಪ್ರದರ್ಶನ ನೀಡದಿದ್ದಾಗಲೂ ವಿರಾಟ್ ಬಾಯ್ ಬೆಂಬಲಿಸಿದ್ದಾರೆ. ಆರ್‌ಸಿಬಿ ಕೂಡಾ ಅವರನ್ನು ಉಳಿಸಿಕೊಂಡು ನಂಬಿಕೆ ವ್ಯಕ್ತಪಡಿಸಿತು. ಸಿರಾಜ್ ಈ ಪ್ರದರ್ಶನಕ್ಕಾಗಿ ನಾನು ವಿರಾಟ್ ಬಾಯ್ ಹಾಗೂ ಆರ್‌ಸಿಬಿಗೆ ಶ್ರೇಯಸ್ಸು ಸಲ್ಲಿಸಲು ಬಯಸುತ್ತೇನೆ' ಎಂದು ಹೇಳಿದರು.

ದೇಶಕ್ಕಾಗಿ ಮಗ ಕ್ರಿಕೆಟ್ ಆಡುವುದನ್ನು ನೋಡುವುದು ಸಿರಾಜ್ ತಂದೆಯ ಬಹುದೊಡ್ಡ ಕನಸಾಗಿತ್ತು. ಕೊನೆಗೂ ಅಪ್ಪನ ಕನಸು ನನಸಾಗಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.