ADVERTISEMENT

ಟಿ20 ಸರಣಿ; ತಿರುಗೇಟು ನೀಡುವ ತವಕದಲ್ಲಿ ವಿರಾಟ್ ಕೊಹ್ಲಿ ಬಳಗ

ಪಿಟಿಐ
Published 3 ಡಿಸೆಂಬರ್ 2020, 11:44 IST
Last Updated 3 ಡಿಸೆಂಬರ್ 2020, 11:44 IST
ಗೆಲುವಿನ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ
ಗೆಲುವಿನ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ   
""

ಕ್ಯಾನ್‌ಬೆರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಎದುರಾದ ಸೋಲಿನ ಬಳಿಕ ಟೀಮ್ ಇಂಡಿಯಾ ಇದೀಗ ಟ್ವೆಂಟಿ-20 ಸರಣಿಯಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ಬುಧವಾರ ಆಸೀಸ್ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ, ಟಿ20 ಸರಣಿಯಲ್ಲೂ ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದೆ.

ಕ್ಯಾನ್‌ಬೆರಾದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 13 ರನ್ ಅಂತರದ ಗೆಲುವು ದಾಖಲಿಸಿತ್ತು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಈ ಮೊದಲು ನಡೆದ ಮೊದಲೆರಡು ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಅನುಕ್ರಮವಾಗಿ 66 ಹಾಗೂ 51 ರನ್‌ಗಳ ಅಂತರದ ಗೆಲುವುಗಳನ್ನು ದಾಖಲಿಸಿತ್ತು. ಈ ಮೂಲಕ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.

ADVERTISEMENT

ಏಕದಿನ ತಂಡಕ್ಕೆ ಹೋಲಿಸಿದಾಗ ಟೀಮ್ ಇಂಡಿಯಾ ಟಿ20 ತಂಡದಲ್ಲೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಗಾಯಾಳು ರೋಹಿತ್ ಶರ್ಮಾ ಸೇವೆಯಿಂದ ವಂಚಿತವಾಗಿರುವ ಭಾರತೀಯ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೇಲೆ ಜವಾಬ್ದಾರಿ ಹೆಚ್ಚಿದೆ.

ಇದನ್ನೂ ಓದಿ: ಸಚಿನ್ ದಾಖಲೆ ಮುರಿದ ಕೊಹ್ಲಿ

ಏಕದಿನ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಾಹುಲ್ ಟಿ20 ಸರಣಿಯಲ್ಲಿ ಶಿಖರ್ ಧವನ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ನಾಯಕ ವಿರಾಟ್ ಕೊಹ್ಲಿ ಜೊತೆಗೆ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಇದರಿಂದಾಗಿ ಮನೀಷ್ ಪಾಂಡೆ, ಮಯಾಂಕ್ ಅಗರವಾಲ್ ಹಾಗೂ ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಹಾತೊರೆಯಬೇಕಾಗಿದೆ. ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಹೊಣೆಯನ್ನು ವಹಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಹಾಗೂ ವಾಷಿಂಗ್ಟನ್ ಸುಂದರ್ ಆಲ್‌ರೌಂಡರ್ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಇತ್ತೀಚೆಗಷ್ಟೇ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪರಿಣಾಮಕಾರಿ ಪ್ರದರ್ಶನ ನೀಡುರುವುದು ವಾಷಿಂಗ್ಟನ್ ಸುಂದರ್‌ಗೆ ವರದಾನವಾಗಲಿದೆ. ಇನ್ನೊಂದೆಡೆ ಏಕದಿನದಲ್ಲಿ ಕಳಪೆ ಪ್ರದರ್ಶನ ನೀಡಿರುವ ಯಜುವೇಂದ್ರ ಚಹಲ್ ಕಮ್ ಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಲಯ ಕಂಡುಕೊಳ್ಳುವುದು ಅತ್ಯಂತ ಮುಖ್ಯವೆನಿಸುತ್ತದೆ. ಅನುಭವಿ ಮೊಹಮ್ಮದ್ ಶಮಿ ಜೊತೆಗೆ ಯುವ ಎಡಗೈ ವೇಗಿ ಟಿ ನಟರಾಜನ್ ಸಹ ಟಿ20 ಕ್ರಿಕೆಟ್‌ನಲ್ಲೂ ಡೆಬ್ಯು ಮಾಡುವ ಸಾಧ್ಯತೆಯಿದೆ. ದೀಪಕ್ ಚಹರ್ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನುಳಿದಂತೆ ನವದೀಪ್ ಸೈನಿ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ:

ಒಟ್ಟಾರೆಯಾಗಿ ಟೀಮ್ ಇಂಡಿಯಾ ಆಡುವ ಬಳಗದ ಸಂಯೋಜನೆ ಹೇಗಿರಲಿದೆ ಎಂಬುದು ಬಹಳ ಕುತೂಹಲ ಕೆರಳಿಸಿದೆ. ಅತ್ತ ಆಸ್ಟ್ರೇಲಿಯಾ ತಂಡವು ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಏಕದಿನ ಸರಣಿಯ ವೇಳೆ ಗಾಯದಿಂದಾಗಿ ಹೊರಗುಳಿದಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸೇವೆಯಿಂದ ವಂಚಿತವಾಗಿದೆ. ಹಾಗಾಗಿ ನಾಯಕ ಆ್ಯರನ್ ಫಿಂಚ್ ಜೊತೆಗೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಆತಿಥೇಯ ನೆಲದಲ್ಲಿ ಬಹುತೇಕ ಎಲ್ಲ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಅಂತಿಮ ಏಕದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿರುವ ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೊಡೆಬಡಿಯ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್, ಪ್ರವಾಸಿಗರಿಗೆ ಅಪಾಯವನ್ನು ತಂದೊಡ್ಡಲಿದ್ದಾರೆ. ಒಟ್ಟಿನಲ್ಲಿ ರೋಚಕ ಕದನಕ್ಕೆ ಟಿ20 ಸರಣಿಯು ವೇದಿಕೆಯೊದಗಿಸಿದೆ.

ಟಿ20 ಸರಣಿ ವೇಳಾಪಟ್ಟಿ ಇಂತಿದೆ:

ಮೊದಲ ಟಿ20: ಡಿ. 4 ಶುಕ್ರವಾರ, ಕ್ಯಾನ್‌ಬೆರಾ
ದ್ವಿತೀಯ ಟಿ20: ಡಿ. 6 ಭಾನುವಾರ, ಸಿಡ್ನಿ
ಅಂತಿಮ ಟಿ20: ಡಿ. 8 ಮಂಗಳವಾರ, ಸಿಡ್ನಿ

ಸಮಯ: ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಅಪರಾಹ್ನ 1.40ಕ್ಕೆ ಸರಿಯಾಗಿ ಪ್ರಾರಂಭವಾಗಲಿದೆ.

ತಂಡಗಳು ಇಂತಿದೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ಉಪನಾಯಕ, ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್ ಮತ್ತು ಟಿ ನಟರಾಜನ್

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆ್ಯಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ಉಪ ನಾಯಕ), ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮೊಯಿಸೆಸ್ ಹೆನ್ರಿಕ್ಸ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಡಾರ್ಸಿ ಶಾರ್ಟ್ ಮತ್ತು ಆ್ಯಡಂ ಜಂಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.