ADVERTISEMENT

ಸುಲಭ ಚೇಸಿಂಗ್ ಲೆಕ್ಕಾಚಾರದಲ್ಲಿದ್ದ ಆಸಿಸ್‌ಗೆ ಬೃಹತ್ ಮೊತ್ತದ ಆಘಾತ ನೀಡಿದ ಭಾರತ

ಕೊನೆಯಲ್ಲಿ ಕಮಾಲ್‌ ಮಾಡಿದ ರಾಹುಲ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 11:59 IST
Last Updated 17 ಜನವರಿ 2020, 11:59 IST
   

ರಾಜ್‌ಕೋಟ್‌: ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಭಾರತ, ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಸವಾಲು ನೀಡಿದೆ. ಟಾಸ್‌ ಗೆದ್ದರೂ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ಕಾಂಗರೂ ಪಡೆಗೆಆಘಾತ ಎದುರಾಗಿದೆ.

ಬ್ಯಾಟಿಂಗ್ ಆರಂಭಿಸಿದ ವಿರಾಟ್‌ ಕೊಹ್ಲಿ ಪಡೆಗೆಆರಂಭಿಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 81 ರನ್ ಕಲೆಹಾಕಿತು. ಉತ್ತಮವಾಗಿ ಆಡುತ್ತಿದ್ದರೋಹಿತ್‌ 42 ರನ್‌ ಗಳಿಸಿದ್ದ ವೇಳೆ ಔಟಾದರು.

ಬಳಿಕ ಧವನ್‌ ಜೊತೆಗೂಡಿದ ನಾಯಕ ಕೊಹ್ಲಿ, ಶತಕದ ಜೊತೆಯಾಟವಾಡಿದರು. 90 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್‌ ನೆರವಿನಿಂದ 96 ರನ್‌ ಗಳಿಸಿದ್ದ ಎಡಗೈ ದಾಂಡಿಗ ಶತಕದ ಹೊಸ್ತಿಲಲ್ಲಿ ಕೇನ್‌ ರಿಚರ್ಡ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ ಕೇವಲ 7 ರನ್‌ ಗಳಿಸಿ ಔಟಾಗಿನಿರಾಸೆ ಮೂಡಿಸಿದರು.

ADVERTISEMENT

78 ರನ್‌ ಗಳಿಸಿದ್ದಕೊಹ್ಲಿ ಈ ಪಂದ್ಯದಲ್ಲಿಯೂ ಆ್ಯಡಂ ಜಂಪಾ ಬೌಲಿಂಗ್‌ನಲ್ಲಿ ಔಟಾದರು. ನಾಯಕ ಮತ್ತು ಉಪನಾಯಕ ಇಬ್ಬರ ವಿಕೆಟ್‌ ಕಬಳಿಸಿದ ಜಂಪಾ ಒಟ್ಟು ಮೂರು ವಿಕೆಟ್‌ ಪಡೆದು ಮಿಂಚಿದರು.

ಕೊನೆಯಲ್ಲಿಕೆ.ಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಬಿರುಸಿನ ಆಟವಾಡಿದ್ದರಿಂದ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆಭಾರತ 340 ರನ್‌ ಕಲೆಹಾಕಲು ಸಾಧ್ಯವಾಯಿತು. ರಾಹುಲ್‌ ಕೇವಲ 52 ಎಸೆತಗಳಲ್ಲಿ 3 ಸಿಕ್ಸರ್‌, 6 ಬೌಂಡರಿ ಸಹಿತ 80 ರನ್‌ ಚಚ್ಚಿದರು. ಜಡೇಜಾ 20 ರನ್‌ ಗಳಿಸಿ ಉತ್ತಮ ಬೆಂಬಲ ನೀಡಿದರು.

ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 255 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತ ಬೆನ್ನಟ್ಟಿದ್ದ ಆಸ್ಟ್ರೇಲಿಯಾ, ಅನುಭವಿ ಆರಂಭಿಕರಾದ ಡೇವಿಡ್‌ ವಾರ್ನರ್‌ (128) ಹಾಗೂ ನಾಯಕ ಫಿಂಚ್‌ (110) ಭರ್ಜರಿ ಬ್ಯಾಟಿಂಗ್ ಬಲದಿಂದ ಅಮೋಘ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.