ಮಿಚೇಲ್ ಮಾರ್ಷ್
ರಾಯಿಟರ್ಸ್ (ಸಂಗ್ರಹ) ಚಿತ್ರ
ಮೆಲ್ಬರ್ನ್: ಆಸ್ಟ್ರೇಲಿಯಾದ ಬ್ಯಾಟಿಂಗ್ ಆಲ್‌ರೌಂಡರ್ ಮಿಚೇಲ್ ಮಾರ್ಷ್ ಅವರು, ಭಾರತ ಎದುರಿನ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ 4ನೇ ಪಂದ್ಯದಲ್ಲೂ ಲಯ ಕಂಡುಕೊಳ್ಳಲು ವಿಫಲವಾಗಿದ್ದಾರೆ.
ಕಳೆದ ಹತ್ತು ಇನಿಂಗ್ಸ್‌ಗಳಲ್ಲಿ ಎರಡು ಬಾರಿಯಷ್ಟೇ ಎರಡಂಕಿ ದಾಟಿರುವ ಅವರ ಬ್ಯಾಟಿಂಗ್ ವೈಫಲ್ಯವು ಆಸಿಸ್ ಪಾಳಯಕ್ಕೆ ತಲೆನೋವಾಗಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿದ್ದ ಮಾರ್ಷ್, ಈ ಬಾರಿ ಸೊನ್ನೆ ಸುತ್ತಿದ್ದಾರೆ. ಎರಡೂ ಇನಿಂಗ್ಸ್‌ಗಳಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.
ಈ ಟೂರ್ನಿಯ ನಾಲ್ಕೂ ಪಂದ್ಯಗಳಲ್ಲಿ ಆಡಿರುವ ಅವರು, 7 ಇನಿಂಗ್ಸ್‌ಗಳಿಂದ ಗಳಿಸಿರುವುದು 73 ರನ್ ಮಾತ್ರ. ಒಂದು ಸಲವಷ್ಟೇ ಎರಡಂಕಿ (47) ರನ್ ಗಳಿಸಿದ್ದಾರೆ.
ಈ ವರ್ಷ ಒಟ್ಟು 9 ಪಂದ್ಯಗಳಲ್ಲಿ ಆಡಿರುವ ಮಾರ್ಷ್, 14 ಇನಿಂಗ್ಸ್‌ಗಳಿಂದ ಎರಡು ಅರ್ಧಶತಕ ಸಹಿತ ಒಟ್ಟು 283 ರನ್ ಗಳಿಸಿದ್ದಾರೆ. ಕಳೆದ ಹತ್ತು ಇನಿಂಗ್ಸ್‌ಗಳಲ್ಲಿ ಅವರು ಗಳಿಸಿರುವ ರನ್ ಕ್ರಮವಾಗಿ 0, 0, 80, 6, 47, 9, 5, 2, 4, 0 ಆಗಿದೆ.
ಭಾರತ ಮರುಹೋರಾಟ
ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ, ಮರುಹೋರಾಟ ನಡೆಸುತ್ತಿದೆ. ಆರಂಭಿಕ ಇನಿಂಗ್ಸ್‌ನಲ್ಲಿ 474 ರನ್‌ಗಳ ಉತ್ತಮ ಮೊತ್ತ ಕಲೆಹಾಕಿದ್ದ ಆತಿಥೇಯರನ್ನು ಈ ಬಾರಿ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವತ್ತ ಹೆಜ್ಜೆ ಇಟ್ಟಿದೆ.
ಎರಡನೇ ಇನಿಂಗ್ಸ್‌ನಲ್ಲಿ ಆಘಾತ ಅನುಭವಿಸಿರುವ ಕಾಂಗರೂ ಪಡೆ 135 ರನ್ ಆಗುವಷ್ಟರಲ್ಲೇ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆದಾಗ್ಯೂ 240 ರನ್‌ಗಳ ಮುನ್ನಡೆ ಸಾಧಿಸಿದೆ.
ವೇಗಿ ಜಸ್‌ಪ್ರೀತ್ ಬೂಮ್ರಾ 4 ಮತ್ತು ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದ್ದಾರೆ. ಪಂದ್ಯವು ಸ್ಪಷ್ಟ ಫಲಿತಾಂಶ ಕಾಣುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.