ಮಳೆಯಿಂದಾಗಿ ಮೈದಾನದಿಂದ ಹೊರ ಹೋಗುತ್ತಿರುವ ಸೂರ್ಯಕುಮಾರ್ ಯಾದವ್ ಹಾಗೂ ಶುಭಮನ್ ಗಿಲ್
ಚಿತ್ರ: @RisingKashmir
ಕ್ಯಾನ್‌ಬೆರಾ: ಈ ವರ್ಷದ ಆರಂಭದಿಂದ ಪರದಾಡುತ್ತಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿ ಲಯಕ್ಕೆ ಮರಳುವ ಸೂಚನೆ ನೀಡಿದರು. ಆದರೆ ಬುಧವಾರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಪಂದ್ಯ ಅರ್ಧದಲ್ಲೇ ರದ್ದಾಯಿತು.
ನಾಯಕನ ಜೊತೆ ಉಪ ನಾಯಕ ಶುಭಮನ್ ಗಿಲ್ (ಅಜೇಯ 37, 20ಎಸೆತ, 4x4, 6x1) ಎಚ್ಚರಿಕೆಮಿಶ್ರಿತ ಆಕ್ರಮಣದ ಆಟವಾಡಿದರು. ಸೂರ್ಯ 24 ಎಸೆತಗಳಲ್ಲಿ ಅಜೇಯ 39 ರನ್ (4x3, 6x2) ಬಾರಿಸಿದರು. ಇವರಿಬ್ಬರು ಮುರಿಯದ ಎರಡನೇ ವಿಕೆಟ್‌ಗೆ 62 ರನ್ ಸೇರಿಸಿದರು. ಇವರಿಬ್ಬರು ದೊಡ್ಡ ಮೊತ್ತದತ್ತ ಸಾಗುವ ಸೂಚನೆ ಕಂಡಾಗ ಮಳೆಯ ಆಟ ಶುರುವಾಯಿತು.
ಆಗ ಭಾರತ 9.4 ಓವರುಗಳಲ್ಲಿ 1 ವಿಕೆಟ್‌ಗೆ 97 ರನ್ ಗಳಿಸಿತ್ತು. ಆ ಹಾದಿಯಲ್ಲಿ ಅಭಿಷೇಕ್ ಶರ್ಮಾ (19, 14ಎ) ಅವರ ವಿಕೆಟ್ ಕಳೆದುಕೊಂಡಿತು.
ಸೂರ್ಯ ಈ ವರ್ಷ ನೂರು ರನ್ ಸಹ ಗಳಿಸಿರಲಿಲ್ಲ. ಅವರ ಸ್ಟ್ರೈಕ್ ರೇಟ್ 110 ಕ್ಕಿಂತ ಕಡಿಮೆಯಿತ್ತು. ಆದರೆ ಈ ಮಹತ್ವದ ಸರಣಿಯ ಮೊದಲ ಪಂದ್ಯದಲ್ಲಿ ಅವರು ತಾವು ವಿಶ್ವದ ಅಗ್ರಮಾನ್ಯ ಆಟಗಾರನಾಗಿರುವುದೇಕೆ ಎಂಬುದನ್ನು ಸಮರ್ಥಿಸುವಂತೆ ಆಡಿದರು. ಹೇಜಲ್‌ವುಡ್ ಎಸೆತದಲ್ಲಿ ಚೆಂಡನ್ನು ಸ್ವೇರ್‌ಲೆಗ್ ಬೌಂಡರಿ ಮೇಲೆ ದಾಟಿಸಿದರು.
ನಥಾನ್ ಎಲಿಸ್ ಬೌಲಿಂಗ್‌ನಲ್ಲಿ ಸ್ವೇರ್‌ಕಟ್‌ನಲ್ಲಿ ಚೆಂಡನ್ನು ಬೌಂಡರಿಗೆ ಚಿಮ್ಮಿಸಿದ ಅವರು, ಪುಲ್ ಹೊಡೆತದಲ್ಲಿ ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿದರು. ಗಿಲ್ ಕೂಡ ಹಿಂದೆಬೀಳದೇ ಸ್ಪಿನ್ನರ್ ಕುನ್ಹೆಮನ್ ಬೌಲಿಂಗ್‌ನಲ್ಲಿ ಸ್ಲಾಗ್‌ಸ್ವೀಪ್ ಮೂಲಕ ಸಿಕ್ಸರ್ ಎತ್ತಿದರು. ಕೊನೆಯ ಐದು ಓವರುಗಳಲ್ಲಿ (4.4ನೇ ಓವರಿನಿಂದ) ಭಾರತ 54 ರನ್ ಬಾಚಿತು.
ಮೊದಲ ಮೂರು ಪಂದ್ಯಗಳಿಂದ ನಿತೀಶ್ ಹೊರಕ್ಕೆ
ಕೆನ್‌ಬೆರಾ: ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಕುತ್ತಿಗೆಯ ನೋವಿನಿಂದಾಗಿ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ.
‘ನಿತೀಶ್ ಅವರು ಕುತ್ತಿಗೆಯ ಸ್ನಾಯುಸೆಳೆತದಿಂದ ಬಳಲುತ್ತಿದ್ದು ಸರಣಿಯ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ’ ಎಂದು ಬಿಸಿಸಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.