ADVERTISEMENT

IND vs AUS Test | ಕುತೂಹಲ ಘಟ್ಟದತ್ತ ಮೆಲ್ಬರ್ನ್ ಟೆಸ್ಟ್

ಮತ್ತೆ ಆರ್ಭಟಿಸಿದ ಜಸ್‌ಪ್ರೀತ್ ಬೂಮ್ರಾ; ಆಸ್ಟ್ರೇಲಿಯಾ ಬಾಲಂಗೋಚಿ ಬ್ಯಾಟರ್‌ಗಳ ಮಿಂಚು

ಮಧು ಜವಳಿ
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
<div class="paragraphs"><p>ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಬುಷೇನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಮೊಹಮ್ಮದ್ ಸಿರಾಜ್ ಅಂಪೈರ್‌ಗೆ ಮನವಿ ಮಾಡಿದರು&nbsp; </p></div>

ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಬುಷೇನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಮೊಹಮ್ಮದ್ ಸಿರಾಜ್ ಅಂಪೈರ್‌ಗೆ ಮನವಿ ಮಾಡಿದರು 

   

ಮೆಲ್ಬರ್ನ್: ಕ್ರಿಕೆಟ್ ಅನಿರೀಕ್ಷಿತಗಳ ಆಗರ ಎಂಬುದಕ್ಕೆ ತಮಗೆ ಮತ್ತೊಂದು ನಿದರ್ಶನ ಬೇಕಿದ್ದರೆ ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಕಳೆದೆರಡು ದಿನಗಳ ಆಟವನ್ನು ನೋಡಬೇಕು. ಶನಿವಾರ ದಿನದಾಟದಲ್ಲಿ ಭಾರತ ತಂಡವು ಅಮೋಘ ಹೋರಾಟ ಮಾಡಿ ಭರವಸೆಯ ಹಾದಿಗೆ ಮರಳಿತ್ತು. ಭಾನುವಾರ ಆತಿಥೇಯ ಆಸ್ಟ್ರೇಲಿಯಾವು ಮರುಹೋರಾಟ ಮಾಡಿ ಪಂದ್ಯದ ಮೇಲೆ ತನ್ನ ಹಿಡಿತ ಸಾಧಿಸಿತು. 

ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ (56ಕ್ಕೆ4)  ಮತ್ತೊಮ್ಮೆ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮಿಂಚಿನ ಸಂಚಲನ ಮೂಡಿಸಿದರು. ಈ ಹಾದಿಯಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಗಳಿಸಿದವರ ಕ್ಲಬ್ ಸೇರಿದರು. ಬೂಮ್ರಾ ಅವರು ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ದೂಳೀಪಟ ಮಾಡಿದರು. ಅದರಿಂದಾಗಿ ಆತಿಥೇಯರು 91 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಭಾರತದ ವಿಜಯದ ಭರವಸೆ ಗರಿಗೆದರಿತು.

ADVERTISEMENT

ಇನ್ನೇನು ಭಾರತವು ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವಷ್ಟರಲ್ಲಿ ಆಸ್ಟ್ರೇಲಿಯಾದ ಕೆಳಕ್ರಮಾಂಕದ ಬ್ಯಾಟರ್‌ಗಳು ಮತ್ತೆ ಮರಳಿ ತಮ್ಮತ್ತ ಗೆಲುವಿನ ಅವಕಾಶವನ್ನು ವಾಲಿಸಿಕೊಂಡರು.  ಕೆಳ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಸೇರಿ 137 ರನ್‌ಗಳ ಕಾಣಿಕೆ ನೀಡಿದರು. ಅದರಲ್ಲೂ ನೇಥನ್ ಲಯನ್ (ಔಟಾಗದೆ 41; 54ಎ) ಮತ್ತು ಸ್ಕಾಟ್ ಬೊಲ್ಯಾಂಡ್ (ಔಟಾಗದೆ 10; 65ಎ) ಮುರಿಯದ ಕೊನೆಯ ವಿಕೆಟ್ ಜೊತೆಯಾಟದಲ್ಲಿ 55 ರನ್ ಸೇರಿಸಿದರು. ಇದು ಮಹತ್ವದ್ದಾಯಿತು. ಅದರಿಂದಾಗಿ ಆತಿಥೇಯ ತಂಡವು ದಿನದಾಟದ ಮುಕ್ತಾಯಕ್ಕೆ 9 ವಿಕೆಟ್‌ಗಳಿಗೆ 228 ರನ್ ಗಳಿಸಿತು. ಒಟ್ಟು 333 ರನ್‌ಗಳ ಮುನ್ನಡೆ ಸಾಧಿಸಿದೆ. 

ಇದರಿಂದಾಗಿ ಪಂದ್ಯದ ಕೊನೆಯ ದಿನವಾದ ಸೋಮವಾರ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಗರಿಗೆದರಿದೆ. 

ಶನಿವಾರ ದಿನದಾಟದ ಕೊನೆಗೆ 9ಕ್ಕೆ 358 ರನ್ ಗಳಿಸಿದ್ದ ಭಾರತ ತಂಡವು ಭಾನುವಾರ ಹೆಚ್ಚು ಹೊತ್ತು ಆಡಲಿಲ್ಲ. ಈ ಮೊತ್ತಕ್ಕೆ 11 ರನ್‌ಗಳು ಸೇರಿದ ನಂತರ ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ (114; 189ಎ) ಔಟಾದರು. ಇನಿಂಗ್ಸ್‌ಗೆ ತೆರೆಬಿತ್ತು. 

105 ರನ್‌ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ಆರಂಭಿಸಿತು. ಮೊದಲ ಇನಿಂಗ್ಸ್‌ನಲ್ಲಿ ತಮ್ಮನ್ನು ಕಾಡಿದ್ದ 19 ವರ್ಷ ವಯಸ್ಸಿನ ಸ್ಯಾಮ್ ಕಾನ್ಸ್‌ಟೆಸ್ ಅವರ ವಿಕೆಟ್‌ ಹಾರಿಸುವಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಯಶಸ್ವಿಯಾದರು. 

ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಔಟಾದಾಗ ಸ್ಯಾಮ್  ಅವರು ಪ್ರೇಕ್ಷಕರತ್ತ ಕೈಬೀಸಿ ಸಂಭ್ರಮಿಸುವಂತೆ ಹುರಿದುಂಬಿಸಿದ್ದರು. ಸ್ಯಾಮ್ (8; 18ಎ) ವಿಕೆಟ್ ಗಳಿಸಿದ ಬೂಮ್ರಾ ಕೂಡ ಅದೇ ರೀತಿಯ ಸಂಭ್ರಮಾಚರಣೆ ಮಾಡಿದರು. 

ಉಸ್ಮಾನ್ ಖ್ವಾಜಾ ಲಯ ಕಂಡುಕೊಳ್ಳಲು ಬಹಳ ಹೊತ್ತು ತೆಗೆದುಕೊಂಡರು. ಆದರೆ ಕ್ರೀಸ್‌ಗೆ ಬಂದ ಮಾರ್ನಸ್ ಲಾಬುಷೇನ್ ತಾಳ್ಮೆಯಿಂದ ಆಡಿ 139 ಎಸೆತಗಳಲ್ಲಿ 70 ರನ್ ಗಳಿಸಿದರು. ಇನ್ನೊಂದೆಡೆಯಿಂದ ಬೌಲಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಖ್ವಾಜಾ (21 ರನ್) ಅವರ ವಿಕೆಟ್ ಗಳಿಸಿದರು. ಸ್ವಲ್ಪ ಹೊತ್ತಿನ ನಂತರ ಸ್ಟೀವನ್ ಸ್ಮಿತ್ (13 ರನ್) ಅವರಿಗೂ ಸಿರಾಜ್ ಪೆವಿಲಿಯನ್ ದಾರಿ ತೋರಿಸಿದರು. 

ಅದರ ನಂತರದ ಓವರ್‌ನಲ್ಲಿಯೇ ಟ್ರಾವಿಸ್ ಹೆಡ್ (1 ರನ್) ಅವರು ತಲೆಯೆತ್ತದಂತೆ ಬೂಮ್ರಾ  ನೋಡಿಕೊಂಡರು. ನಿತೀಶ್ ಕುಮಾರ್ ಪಡೆದ ಕ್ಯಾಚ್‌ಗೆ ಹೆಡ್ ಔಟಾದರು. ಬೂಮ್ರಾಗೆ 200ನೇ ವಿಕೆಟ್‌ ಆದರು.  ಅದೇ ಓವರ್‌ನಲ್ಲಿ ಮಿಚೆಲ್ ಮಾರ್ಷ್‌ಗೆ ಖಾತೆ ತೆರೆಯಲು ಕೂಡ ಬೂಮ್ರಾ ಬಿಡಲಿಲ್ಲ. ತಮ್ಮ ನಂತರದ ಓವರ್‌ನಲ್ಲಿ ಅಲೆಕ್ಸ್ ಕ್ಯಾರಿಯನ್ನೂ ಕ್ಲೀನ್‌ ಬೌಲ್ಡ್ ಮಾಡಿದ ಬೂಮ್ರಾ ಸಂಭ್ರಮಿಸಿದರು. 

ಬೌಂಡರಿ ಬಳಿ ಫೀಲ್ಡಿಂಗ್ ಮಾಡುವಾಗ ಪ್ರೇಕ್ಷಕರಿಂದ ಸತತವಾಗಿ ನಿಂದನೆಗೊಳಗಾಗುತ್ತಿದ್ದ ಸಿರಾಜ್ ಅವರು ಮಾರ್ನಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ ಸೇಡು ತೀರಿಸಿಕೊಂಡರು. ಆದರೆ ಪ್ಯಾಟ್ ಕಮಿನ್ಸ್ (41ರನ್), ಲಯನ್ ಹಾಗೂ ಸ್ಕಾಟ್  ಅವರು ಈ ವಿಕೆಟ್‌ ಪತನಕ್ಕೆ ತಡೆಯೊಡ್ಡಿದರು. ತಮ್ಮ ತಂಡಕ್ಕೆ ಉತ್ತಮ ಮುನ್ನಡೆ ಒದಗಿಸಿಕೊಟ್ಟರು. 

ಪಂದ್ಯ ಆರಂಭ: ಬೆಳಿಗ್ಗೆ 5

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ 

ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 474 (122.4 ಓವರ್‌ಗಳಲ್ಲಿ)

ಭಾರತ 369 (119.3 ಓವರ್‌ಗಳಲ್ಲಿ). (ಶನಿವಾರ 116 ಓವರ್‌ಗಳಲ್ಲಿ 9ಕ್ಕೆ 358)

ನಿತೀಶ್‌ ಸಿ ಸ್ಟಾರ್ಕ್‌ ಬಿ ಲಯನ್‌ 114 (189ಎ, 4x11,6x1) 

ಸಿರಾಜ್‌ ಔಟಾಗದೇ 4 (15 ಎ)

ಇತರೆ: 11 (ಲೆಗ್‌ಬೈ 2, ನೋಬಾಲ್‌ 4, ವೈಡ್‌ 5)

ವಿಕೆಟ್ ಪತನ: 10–369 (ನಿತೀಶ್‌ ಕುಮಾರ್‌ ರೆಡ್ಡಿ, 119.3)  

ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 25–2–86–0, ಪ್ಯಾಟ್‌ ಕಮಿನ್ಸ್‌ 29–6–89–3, ಸ್ಕಾಟ್‌ ಬೋಲ್ಯಾಂಡ್‌ 27–7–57–3, ನೇಥನ್‌ ಲಯನ್‌ 28.3–4–96–3, ಮಿಚೆಲ್‌ ಮಾರ್ಷ್‌ 7–1–28–0, ಟ್ರಾವಿಸ್‌ ಹೆಡ್‌ 3–0–11–0

ಎರಡನೇ ಇನಿಂಗ್ಸ್‌

ಆಸ್ಟ್ರೇಲಿಯಾ 9ಕ್ಕೆ 228 (82 ಓವರ್‌ಗಳಲ್ಲಿ) 

ಸ್ಯಾಮ್‌ ಬಿ ಬೂಮ್ರಾ 8 (18ಎ, 4X1)

ಖ್ವಾಜಾ ಬಿ ಸಿರಾಜ್‌  21 (65ಎ, 4X2)

ಲಾಬುಷೇನ್ ಎಲ್‌ಬಿಡಬ್ಲ್ಯು ಸಿರಾಜ್‌ 70 (139ಎ, 4X3)

ಸ್ಮಿತ್‌ ಸಿ ಪಂತ್‌ ಬಿ ಸಿರಾಜ್‌ 13 (41ಎ, 4x1)

ಹೆಡ್‌ ಸಿ ನಿತೀಶ್‌ ಬಿ ಬೂಮ್ರಾ 1 (2ಎ) 

ಮಾರ್ಷ್‌ ಸಿ ಪಂತ್‌ ಬಿ ಬೂಮ್ರಾ 0 (4ಎ)

ಕ್ಯಾರಿ ಬಿ ಬೂಮ್ರಾ  2 (7 ಎ)  

ಕಮಿನ್ಸ್‌ ಸಿ ಶರ್ಮಾ ಬಿ ಜಡೇಜ 41 (90ಎ, 4x4)  

ಸ್ಟಾರ್ಕ್‌ ರನೌಟ್‌ ನಿತೀಶ್‌/ಪಂತ್‌ 5 (13ಎ) 

ಲಯನ್‌  ಔಟಾಗದೇ 41 (54ಎ, 4x5)  

ಬೋಲ್ಯಾಂಡ್‌ ಔಟಾಗದೇ 10 (65ಎ, 4x1)  

ಇತರೆ: 16 (ಲೆಗ್‌ಬೈ 9, ನೋಬಾಲ್‌ 6 ವೈಡ್‌ 1)

ವಿಕೆಟ್ ಪತನ: 1–20 (ಸ್ಯಾಮ್‌ ಕಾನ್ಸಟೆಸ್‌, 6.3), 2–43 (ಉಸ್ಮಾನ್‌ ಖ್ವಾಜಾ, 18.5 ಓವರ್‌) 3–80 (ಸ್ಟೀವ್‌ ಸ್ಮಿತ್‌, 32.3) 4–85 (ಟ್ರಾವಿಸ್‌ ಹೆಡ್‌, 33.2) 5– 85 (ಮಿಚೆಲ್‌ ಮಾರ್ಷ್, 33.6) 6–91 (ಆಲೆಕ್ಸ್‌ ಕ್ಯಾರಿ 35.6), 7–148 (ಮಾರ್ನಸ್‌ ಲಾಬುಷೇನ್, 55.1), 8–156 (ಮಿಚೆಲ್‌ ಸ್ಟಾರ್ಕ್, 58.1), 9–173 (ಪ್ಯಾಟ್‌ ಕಮಿನ್ಸ್‌, 64.1) 

ಬೌಲಿಂಗ್‌: ಜಸ್‌ಪ್ರೀತ್‌ ಬೂಮ್ರಾ 24–7–56–4,

ಆಕಾಶ್‌ದೀಪ್‌ 17–4–53–0,

ಮೊಹಮ್ಮದ್‌ ಸಿರಾಜ್‌ 22–4–66–3, ರವೀಂದ್ರ ಜಡೇಜ 14–2–33–1, ನಿತೀಶ್‌ ಕುಮಾರ್‌ 1–0–4–0, ವಾಷಿಂಗ್ಟನ್‌ ಸುಂದರ್‌ 4–0–7–0

ನಿತೀಶ್ ಕುಮಾರ್ ರೆಡ್ಡಿ ಅವರ ಕುಟುಂಬ 

ಗಾವಸ್ಕರ್ ಭೇಟಿಯಿಂದ ಪುಳಕಿತರಾದ ರೆಡ್ಡಿ ಕುಟುಂಬ

ಮೆಲ್ಬರ್ನ್: ಭಾರತ ಕ್ರಿಕೆಟ್‌ನ ನವತಾರೆ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಮುತ್ಯಾಲು ರೆಡ್ಡಿ ಅವರು ಭಾನುವಾರ ತಮ್ಮ ಬಾಲ್ಯದ ಹೀರೊ ಸುನಿಲ್ ಗಾವಸ್ಕರ್ ಅವರನ್ನು ಭೇಟಿಯಾದಾಗ ಭಾವುಕರಾದರು. ಅಧಿಕೃತ ಪ್ರಸಾರಕರ ಬಾಕ್ಸ್‌ಗೆ ರೆಡ್ಡಿ ಅವರ ಕುಟುಂಬವನ್ನು ಆಹ್ವಾನಿಸಲಾಗಿತ್ತು. ಅಲ್ಲಿ ವೀಕ್ಷಕ ವಿವರಣೆಗಾರ ಗಾವಸ್ಕರ್ ಅವರ ಕಾಲು ಮುಟ್ಟಿ ನಮಸ್ಮರಿಸಿದ ಮುತ್ಯಾಲು ರೆಡ್ಡಿ ಮತ್ತು ಅವರ ಪತ್ನಿ ಗದ್ಗದಿತರಾದರು.  ಈ ಸಂದರ್ಭದಲ್ಲಿ ಮಾತನಾಡಿದ ಮುತ್ಯಾಲು ಅವರು ‘ನಾವೆಲ್ಲ ತಮ್ಮ ಆಟವನ್ನು ನೋಡುತ್ತ ಕ್ರಿಕೆಟ್‌ ಪ್ರೀತಿ ಬೆಳೆಸಿಕೊಂಡವರು. ಇವತ್ತು ತಮ್ಮೆಲ್ಲರನ್ನೂ ಭೇಟಿಯಾಗುವ ಅವಕಾಶ ಲಭಿಸಿದೆ. ಅದಕ್ಕೆ ಕಾರಣ ಮಗನ ಸಾಧನೆ’ ಎಂದರು. 

‘ನಿತೀಶ್ 99 ರನ್‌ ಗಳಿಸಿದ್ದ ಸಂದರ್ಭದಲ್ಲಿ ಕೊನೆಯ ವಿಕೆಟ್‌ ಮಾತ್ರ ಉಳಿದಿತ್ತು.  ನಾನು ಸ್ವಲ್ಪ ಒತ್ತಡದಲ್ಲಿದ್ದೆ. ಆದರೆ ಸಿರಾಜ್ ಅವರು ಅಮೋಘವಾಗಿ ಆಡಿದರು. ಮೂರು ಡಾಟ್ ಬಾಲ್‌ಗಳನ್ನು ಆಡಿ ನಿತೀಶ್ ಚೊಚ್ಚಲ ಶತಕ ಮಾಡಲು ಸಹಕರಿಸಿದರು. ಧನ್ಯವಾದಗಳು ಡಿಎಸ್‌ಪಿ (ಸಿರಾಜ್) ಸರ್’ ಎಂದರು.  ಮುತ್ಯಾಲು ಅವರು ತೆಲುಗಿನಲ್ಲಿಯೇ ಸಂದರ್ಶನ ನೀಡಿದರು. ನಿತೀಶ್ ಅವರ ತಂಗಿ ತೇಜಸ್ವಿ ಅವರು ಇಂಗ್ಲಿಷ್‌ಗೆ ಭಾಷಾಂತರಿಸಿದರು. ತೇಜಸ್ವಿ ಅವರು ಉಜ್ಭೇಕಿಸ್ತಾನದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

‘ನಿತೀಶ್‌ಗೆ ಮಾಂಸಾಹಾರಿ ಖಾದ್ಯಗಳೆಂದರೆ ಪ್ರೀತಿ. ನಿತೀಶ್ ಮೀನಿನ ಖಾದ್ಯ ಮತ್ತು ಆಂಧ್ರ ಶೈಲಿಯ ಮಟನ್ ಗೊಂಗುರಾ ಎಂದರೆ ಅಚ್ಚುಮೆಚ್ಚು’ ಎಂದು ತಾಯಿ ಶರ್ಮಿಳಾ ಹೇಳಿದರು.  ಈ ಸಂದರ್ಭದಲ್ಲಿ ಸುನಿಲ್ ಗಾವಸ್ಕರ್ ಅವರು ‘ದೇಶಕ್ಕೆ ಉತ್ತಮ ಆಟಗಾರನನ್ನು ಕೊಟ್ಟಿದ್ದೀರಿ’ ಎಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗಾವಸ್ಕರ್ ಕೂಡ ಭಾವುಕರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.