ADVERTISEMENT

IND vs BAN 1st Test | ಭಾರತ 404ಕ್ಕೆ ಆಲೌಟ್; ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 10:22 IST
Last Updated 15 ಡಿಸೆಂಬರ್ 2022, 10:22 IST
ಭಾರತ ತಂಡದ ಆಟಗಾರರ ಸಂಭ್ರಮ (ಚಿತ್ರಕೃಪೆ: Twitter / @BCCI)
ಭಾರತ ತಂಡದ ಆಟಗಾರರ ಸಂಭ್ರಮ (ಚಿತ್ರಕೃಪೆ: Twitter / @BCCI)   

ಚಿತ್ತಗಾಂಗ್: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 404 ರನ್‌ ಗಳಿಸಿ ಆಲೌಟ್‌ ಆಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಅನುಭವಿ ಚೇತೇಶ್ವರ ಪೂಜಾರ (90), ಯುವ ಆಟಗಾರ ಶ್ರೇಯಸ್‌ ಅಯ್ಯರ್‌ (86), ಆಲ್ರೌಂಡರ್‌ ಆರ್.ಅಶ್ವಿನ್‌ (58) ಗಳಿಸಿದ ಅರ್ಧಶತಕ ಹಾಗೂ ಸ್ಪಿನ್ನರ್‌ ಕುಲದೀಪ್‌ ಯಾದವ್‌ (40) ಅವರ ಉಪಯಕ್ತ ಬ್ಯಾಟಿಂಗ್‌ ಬಲದಿಂದ ಉತ್ತಮ ಮೊತ್ತ ಪೇರಿಸಿದೆ.

ಬಾಂಗ್ಲಾ ಪರ ತೈಚುಲ್‌ ಇಸ್ಲಾಂ ಮತ್ತು ಮೆಹದಿ ಹಸನ್‌ ಮಿರಾಜ್‌ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಎಬಾದತ್‌ ಹೊಸೈನ್ ಹಾಗೂ ಖಾಲಿದ್‌ ಅಹಮದ್‌ ಒಂದೊಂದು ವಿಕೆಟ್‌ ಹಂಚಿಕೊಂಡರು.

ADVERTISEMENT

ಸದ್ಯ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶಕ್ಕೆ ವೇಗಿಗಳಾದ ಮೊಹಮ್ಮದ್‌ ಸಿರಾಜ್‌ ಮತ್ತು ಉಮೇಶ್‌ ಯಾದವ್‌ ಆರಂಭಿಕ ಆಘಾತ ನೀಡಿದ್ದಾರೆ. ಆತಿಥೇಯ ತಂಡ 39 ರನ್‌ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ. ಆರಂಭಿಕ ನಿಜಾಮುಲ್‌ ಹೊಸೈನ್ ಶಾಂಟೊ (0) ಹಾಗೂ ಲಿಟನ್‌ ದಾಸ್‌ಗೆ(24) ಸಿರಾಜ್‌ ಪೆವಿಲಿಯನ್‌ ದಾರಿ ತೊರಿದ್ದಾರೆ.ಯಾಸಿರ್‌ ಅಲಿ (4) ಅವರು ಉಮೇಶ್‌ಬೌಲಿಂಗ್‌ನಲ್ಲಿಔಟಾಗಿದ್ದಾರೆ..

ಜಾಕಿರ್‌ ಹಸನ್ (11) ಮತ್ತು ಇನ್ನೂ ಖಾತೆ ತೆರೆಯದ ಮುಷ್ಫಿಕುರ್‌ ರಹೀಂ ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.