ADVERTISEMENT

IND v BAN Test: ಶತಕದ ಸನಿಹ ಎಡವಿದ ಪಂತ್–ಅಯ್ಯರ್; ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2022, 13:33 IST
Last Updated 23 ಡಿಸೆಂಬರ್ 2022, 13:33 IST
ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌
ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌   

ಮೀರ್‌ಪುರ್:ರಿಷಭ್‌ ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಭಾರತ ಕ್ರಿಕೆಟ್‌ ತಂಡವು ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಬಾಂಗ್ಲಾ, ಮೊದಲ ಇನಿಂಗ್ಸ್‌ನಲ್ಲಿ 227 ರನ್ ಗಳಿಸಿ ಆಲೌಟ್ ಆಗಿತ್ತು. ಭಾರತ ಪರ ಅನುಭವಿ ಬೌಲರ್‌ಗಳಾದ ವೇಗಿ ಉಮೇಶ್‌ ಯಾದವ್‌ ಮತ್ತು ಸ್ಪಿನ್ನರ್‌ ಆರ್.ಅಶ್ವಿನ್‌ ತಲಾ ನಾಲ್ಕು ವಿಕೆಟ್‌ ಉರುಳಿಸಿ ಮಿಂಚಿದ್ದರು.

ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ನಾಯಕ ಕೆ.ಎಲ್‌.ರಾಹುಲ್‌ 10 ರನ್ ಗಳಿಸಿದರೆ, ಶುಭಮನ್‌ ಗಿಲ್‌ 20 ರನ್‌ ಬಾರಿಸಿ ಔಟಾದರು. ನಂತರ ಬಂದ ಟೆಸ್ಟ್‌ ಪರಿಣತ ಚೇತೇಶ್ವರ್ ಪೂಜಾರಾ ಮತ್ತು ಅನುಭವಿ ವಿರಾಟ್‌ ಕೊಹ್ಲಿ ಆಟ ತಲಾ 24 ರನ್‌ಗಳಿಗೆ ಸೀಮಿತವಾಯಿತು.

ADVERTISEMENT

ತಂಡದ ಮೊತ್ತ 94 ರನ್‌ಗೆ 4 ವಿಕೆಟ್‌ ಆಗಿದ್ದಾಗ ಜೊತೆಯಾದ ಪಂತ್‌ ಹಾಗೂ ಅಯ್ಯರ್‌ 5ನೇ ವಿಕೆಟ್‌ ಜೊತೆಯಾಟದಲ್ಲಿ 159 ರನ್‌ ಕಲೆಹಾಕಿದರು. ಹೀಗಾಗಿ ಭಾರತ ಸುಲಭವಾಗಿ ಇನಿಂಗ್ಸ್‌ ಮುನ್ನಡೆ ಸಾಧಿಸಿತು. ಆದರೆ, ಇವರಿಬ್ಬರೂ ಶತಕದ ಹೊಸ್ತಿಲಲ್ಲಿ ಎಡವಿದರು. ತಲಾ 105 ಎಸೆತಗಳನ್ನು ಎದುರಿಸಿದ ಪಂತ್‌ ಮತ್ತು ಅಯ್ಯರ್‌ ಕ್ರಮವಾಗಿ 93 ಹಾಗೂ 87 ರನ್‌ ಕಲೆಹಾಕಿದರು.

ಅಂತಿಮವಾಗಿ ಭಾರತ ತಂಡ 314 ರನ್‌ ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ 87 ರನ್‌ಗಳ ಮುನ್ನಡೆ ಸಾಧಿಸಿತು. ಬಾಂಗ್ಲಾ ಪರ ಶಕೀಬ್‌ ಅಲ್‌ ಹಸನ್‌ ಮತ್ತು ತೈಜುಲ್‌ ಇಸ್ಲಾಂ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡರು.

ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.