ADVERTISEMENT

IND vs ENG Test | ಜೈಸ್ವಾಲ್‌, ಗಿಲ್ ಶತಕ: ಬೃಹತ್ ಮೊತ್ತದತ್ತ ಭಾರತ

ಪಿಟಿಐ
Published 20 ಜೂನ್ 2025, 14:48 IST
Last Updated 20 ಜೂನ್ 2025, 14:48 IST
<div class="paragraphs"><p>ಯಶಸ್ವಿ ಜೈಸ್ವಾಲ್</p></div>

ಯಶಸ್ವಿ ಜೈಸ್ವಾಲ್

   

(ರಾಯಿಟರ್ಸ್ ಚಿತ್ರ)

ಲೀಡ್ಸ್: ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ (101, 159ಎ) ಮತ್ತು ನಾಯಕ ಶುಭಮನ್ ಗಿಲ್ (ಔಟಾಗದೇ 127) ಅವರು ಸೊಗಸಾದ ಶತಕಗಳನ್ನು ಬಾರಿಸುವ ಮೂಲಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟೆಸ್ಟ್‌ ನಿವೃತ್ತಿಯಿಂದ ಉಂಟಾದ ನಿರ್ವಾತವನ್ನು ತುಂಬುವ ಭರವಸೆ ಮೂಡಿಸಿದರು. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರ ಭಾರತ 3 ವಿಕೆಟ್‌ಗೆ 359 ರನ್‌ ಗಳಿಸಿ ಪ್ರಾಬಲ್ಯ ಮೆರೆಯಿತು.

ADVERTISEMENT

ಬ್ಯಾಟ್ ಮಾಡಲು ಕಳಿಸಲ್ಪಟ್ಟ ಭಾರತ ಕೆ.ಎಲ್.ರಾಹುಲ್ (42) ಮತ್ತು ಚೊಚ್ಚಲ ಟೆಸ್ಟ್‌ ಆಡಿದ ಸಾಯಿ ಸುದರ್ಶನ್ ಅವರನ್ನು ಅಲ್ಪಅಂತರದಲ್ಲಿ ಕಳೆದುಕೊಂಡಿತ್ತು. ಆದರೆ ಗಿಲ್‌ ಮತ್ತು ಜೈಸ್ವಾಲ್‌ ಮೂರನೇ ವಿಕೆಟ್‌ಗೆ 129 ರನ್ ಸೇರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ದಿನದ ಕೊನೆಗೆ ನಾಯಕನ ಜೊತೆಗೆ ಉಪನಾಯಕ ರಿಷಭ್ ಪಂತ್‌ ಅಜೇಯ 65 ರನ್ ಗಳಿಸಿ ಆಟ ಕಾದಿರಿಸಿದರು. 

ಗಿಲ್‌ ಅವರು ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ ‘ಆಯ್ದ ಆಟಗಾರರ’ ಕ್ಲಬ್‌ಗೆ ಸೇರಿದರು. ಈ ಹಿಂದೆ ವಿಜಯ್‌ ಹಜಾರೆ (164*), ಸುನಿಲ್‌ ಗಾವಸ್ಕರ್‌ (116), ದಿಲೀಪ್‌ ವೆಂಗಸರ್ಕರ್‌ (102)ಮತ್ತು ವಿರಾಟ್‌ ಕೊಹ್ಲಿ (141) ಅವರೂ ನಾಯಕರಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ್ದರು.

ಗಿಲ್ ಮತ್ತು ಪಂತ್ ಮುರಿಯದ ನಾಲ್ಕನೇ ವಿಕೆಟ್‌ಗೆ 138 ರನ್ ಸೇರಿಸಿದ್ದಾರೆ. ಆಕ್ರಮಣಕಾರಿಯಾಗಿ ಪಂತ್‌ಗೆ ಇದು 16ನೇ ಅರ್ಧ ಶತಕವಾಗಿದ್ದು, ಟೆಸ್ಟ್‌ ಮಾದರಿಯಲ್ಲಿ 3000 ರನ್‌ಗಳ ಮೈಲಿಗಲ್ಲು ದಾಟಿದರು.

ಚಹ ವಿರಾಮಕ್ಕೆ ಕೆಲವೇ ಕ್ಷಣ ಮೊದಲು ಜೈಸ್ವಾಲ್‌ ಶತಕ ಬಾರಿಸಿದರೆ, ಕೊನೆಯ ಅವಧಿಯಲ್ಲಿ ಗಿಲ್‌  ಮೂರಂಕಿ ಮೊತ್ತ ತಲುಪಿ ಭಾರತದ ಕ್ರಿಕೆಟ್‌ನ ತಾರೆಗಳಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು.

ಜೇಮ್ಸ್‌ ಆ್ಯಂಡರ್ಸನ್ ಮತ್ತು ಸ್ಟುವರ್ಟ್‌ ಬ್ರಾಡ್‌ ಅವರ ನಿವೃತ್ತಿ ಇಂಗ್ಲೆಂಡ್ ತಂಡದ ವೇಗದ ದಾಳಿಯ ಮೇಲೆ ಪರಿಣಾಮ ಬೀರಿದಂತೆ ಕಂಡಿತು. ಒಂದೆಡೆ ಬೌಲಿಂಗ್‌ ಮೊನಚು ಕಳೆದುಕೊಂಡರೆ, ಇನ್ನೊಂದು ಕಡೆ ಪಿಚ್‌ನಲ್ಲೂ ಬೌಲರ್‌ಗಳಿಗೆ ಅಂಥ ನೆರವು ಸಿಗಲಿಲ್ಲ. 

ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಐದು ಪಂದ್ಯಗಳಿಂದ 712 ರನ್‌ ಪೇರಿಸಿದ್ದ ಯಶಸ್ವಿ, ಹೆಡಿಂಗ್ಲೆಯಲ್ಲಿಯೂ ಶತಕದ ಆರಂಭ ಮಾಡಿದರು. 159 ಎಸೆತಗಳಲ್ಲಿ 101 ರನ್‌ ಗಳಿಸಿದರು. ತಂಡ ಚಹಾ ವಿರಾಮಕ್ಕೆ 2 ವಿಕೆಟ್‌ಗಳಿಗೆ 215 ರನ್ ಗಳಿಸಿತ್ತು. 

ಈ ಹಾದಿಯಲ್ಲಿ ಯಶಸ್ವಿ ಅವರು ಎರಡು ಮಹತ್ವದ ಜೊತೆಯಾಟಗಳಲ್ಲಿ ರನ್‌ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿಗೆ  ಅನುಭವಿ ಕೆ.ಎಲ್. ರಾಹುಲ್ (42; 78ಎಸೆತ) ಅವರೊಂದಿಗೆ 91 ರನ್ ಸೇರಿಸಿದರು. ಅರ್ಧಶತಕದತ್ತ ಸಾಗಿದ್ದ ರಾಹುಲ್ ಬ್ರೈಡನ್ ಕೇರ್ಸ್ ಬೌಲಿಂಗ್‌ನಲ್ಲಿ ಜೋ ರೂಟ್‌ಗೆ ಕ್ಯಾಚಿತ್ತರು. 

ಪದಾರ್ಪಣೆ ಪಂದ್ಯ ಆಡಿದ ಸಾಯಿ ಸುದರ್ಶನ್ ಕೇವಲ ನಾಲ್ಕು ಎಸೆತ ಎದುರಿಸಿದರು. ಆದರೆ ಅವರಿಗೆ ಖಾತೆ ತೆರೆಯಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ ಬಿಡಲಿಲ್ಲ. ಜೇಮಿ ಸ್ಮಿತ್ ಪಡೆದ ಚೆಂದದ ಕ್ಯಾಚ್‌ಗೆ ಸಾಯಿ ನಿರ್ಗಮಿಸಿದರು. 

ನಾಲ್ಕನೇ ಕ್ರಮಾಂಕದಲ್ಲಿ ಬಂದ ಗಿಲ್ ಅವರು ಯಶಸ್ವಿ ಜೊತೆ ಸೇರಿಕೊಂಡು ಇನಿಂಗ್ಸ್‌ಗೆ ಬಲ ತುಂಬಿದರು. ಈ ಮೊದಲು ವಿರಾಟ್ ಕೊಹ್ಲಿ ಆಡುತ್ತಿದ್ದ ಕ್ರಮಾಂಕ ಇದು. ಅವರ ಸ್ಥಾನವನ್ನು ತುಂಬುವ ಭರವಸೆಯನ್ನು ಗಿಲ್ ಮೂಡಿಸಿದರು.  

ಅದರಲ್ಲೂ ಯಶಸ್ವಿ ಅವರ ಬ್ಯಾಟಿಂಗ್‌ ಸೊಬಗು ಕಣ್ಮನ ಸೆಳೆಯಿತು. ಇಂಗ್ಲೆಂಡ್ ನೆಲದ ಸ್ವಿಂಗ್ ಮತ್ತು ಸೀಮ್‌ ಅರೆದು ಕುಡಿದ ಅನುಭವಿಗಳಂತೆ ಬ್ಯಾಟ್ ಬೀಸಿದ ಯುವ ಎಡಗೈ ಬ್ಯಾಟರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 5ನೇ ಶತಕ ಹೊಡೆದರು. 23 ವರ್ಷ ವಯಸ್ಸಿನ ಯಶಸ್ವಿ ಎದುರಾಳಿ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಒಳ್ಳೆಯ ಎಸೆತಗಳಿಗೆ ಗೌರವ ಸಲ್ಲಿಸಿದ ಅವರು, ರನ್‌ ಗಳಿಸುವ ಅವಕಾಶವಿದ್ದ ಎಸೆತಗಳನ್ನು ವ್ಯರ್ಥ ಮಾಡಲಿಲ್ಲ.  

ಸ್ಟೋಕ್ಸ್‌ ಪ್ರತಿಯೊಂದು ಹಂತದಲ್ಲಿಯೂ ಬದಲಾವಣೆ ಮಾಡಿದ ಫೀಲ್ಡಿಂಗ್ ನಿಯೋಜನೆಗಳನ್ನು ಯಶಸ್ವಿ ವಿಫಲಗೊಳಿಸಿದರು. ಗಿಲ್ ಕ್ರೀಸ್‌ಗೆ ಬಂದವರೇ ವೇಗದ ಆಟಕ್ಕೆ ಒತ್ತು ನೀಡಿದರು. ಬೌಂಡರಿಗಳನ್ನು ಸಿಡಿಸಿದರು. ಇದರಿಂದಾಗಿ ರನ್‌ಗಳು ಹರಿದುಬಂದವು. ಪಂಜಾಬಿ ಹುಡುಗ ಗಿಲ್ ತಮ್ಮ ನಾಯಕತ್ವದ ಮೊದಲ ಇನಿಂಗ್ಸ್‌ಗೆ ಭರ್ಜರಿ ಆರಂಭ ನೀಡಿದರು. 

ಕಪ್ಪುಪಟ್ಟಿ
ಈಚೆಗೆ ಅಹಮದಾಬಾದಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾರತ ಮತ್ತು ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು. ವಿಮಾನ ದುರಂತದಲ್ಲಿ 241 ಮಂದಿ ದುರ್ಮರಣ ಹೊಂದಿದ್ದರು. ಅದರಲ್ಲಿ ಇಂಗ್ಲೆಂಡ್ ಪ್ರಜೆಗಳೂ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.