ರವೀಂದ್ರ ಜಡೇಜ, ಶುಭಮನ್ ಗಿಲ್
(ರಾಯಿಟರ್ಸ್ ಚಿತ್ರ)
ಎಜ್‌ಬಾಸ್ಟನ್: ಶುಭಮನ್ ಗಿಲ್ ಅವರು ದೇಶದ ಅತ್ಯಂತ ಕಠಿಣ ಸವಾಲಿನ ಕಾರ್ಯಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ನಾಯಕನಾಗಿ ಇನ್ನೂ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಆದರೆ ಹಲವು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೂ ತಮ್ಮ ಬ್ಯಾಟಿಂಗ್ ಸೊಬಗನ್ನು ಮರೆತಿಲ್ಲ. ಬದಲಿಗೆ ರನ್‌ಗಳ ಹೊಳೆ ಹರಿಸುತ್ತಿದ್ದಾರೆ.
ಇಂಗ್ಲೆಂಡ್ ಎದುರು ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ದ್ವಿಶತಕ ಗಳಿಸಿದರು. 25 ವರ್ಷದ ಗಿಲ್ ಅವರ ವೃತ್ತಿಜೀವನದ ಮೊದಲ ದ್ವಿಶತಕ ಇದಾಗಿದೆ. ಪಂದ್ಯದ ಮೊದಲ ದಿನವಾದ ಬುಧವಾರ ಗಳಿಸಿದ್ದ ಅಜೇಯ ಶತಕವನ್ನು ಅವರು ಗುರುವಾರ ತ್ರಿಶತಕದ ಸಮೀಪ ಒಯ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತದ 19 ವರ್ಷದೊಳಗಿನ ತಂಡದ ಆಟಗಾರರು ಇದ್ದರು. ‘ಕ್ರಿಕೆಟ್ ಪಠ್ಯ ಪುಸ್ತಕ’ದ ಚೆಂದದ ಹೊಡೆತಗಳನ್ನೆಲ್ಲ ಪ್ರಯೋಗಿಸಿದ ಗಿಲ್ ಆಟ ಅವರಿಗೆ ಪಾಠದಂತಿತ್ತು. 266 ರನ್ ಗಳಿಸಿದ್ದ ಗಿಲ್ ಅವರ ಆಟದಿಂದ ತಂಡವು 151 ಓವರ್‌ಗಳಲ್ಲಿ 587 ರನ್ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 77 ರನ್ ಗಳಿಸಿ ಒತ್ತಡಕ್ಕೆ ಸಿಲುಕಿದೆ.
ಬಿಸಿಲು ಹರಡಿದ್ದ ವಾತಾವರಣ ದಲ್ಲಿ ಎರಡನೇ ದಿನದಾಟವನ್ನು ಪ್ರವಾಸಿ ತಂಡವು ಉತ್ತಮವಾಗಿ ಆರಂಭಿಸಿತು. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದ ಮೊದಲ ದಿನ ಶತಕ ಹೊಡೆದು ಎರಡನೇ ದಿನಕ್ಕೆ ಆಟ ಕಾಯ್ದಿಟ್ಟುಕೊಂಡಿದ್ದರು ಗಿಲ್. ಆದರೆ ಅಲ್ಲಿ ಅವರೊಂದಿಗೆ ಕ್ರೀಸ್‌ನಲ್ಲಿ ರಿಷಭ್ ಪಂತ್ ಇದ್ದರು. 3ಕ್ಕೆ359 ರನ್‌ಗಳ ಸ್ಕೋರ್ ದಾಖಲಾಗಿತ್ತು. ಇಲ್ಲಿ 5ಕ್ಕೆ310ರ ಸ್ಕೋರ್‌ನಲ್ಲಿ ಜಡೇಜ ಅವರೊಂದಿಗೆ ಜೊತೆಯಾಗಿದ್ದರು. ಆದರೂ ದೊಡ್ಡ ಮೊತ್ತ ಕಲೆಹಾಕುವ ಗುರಿ ಗಿಲ್ ಮನದಲ್ಲಿತ್ತು. ಆದ್ದರಿಂದ ಏಕಾಗ್ರಚಿತ್ತದಿಂದ ಆಡಿದರು.
ಇನ್ನೊಂದು ಬದಿಯಲ್ಲಿ ಜಡೇಜ ಕೂಡ ಚೆಂದದ ಬ್ಯಾಟಿಂಗ್ ಮಾಡಿದರು. ಇಬ್ಬರೂ 6ನೇ ವಿಕೆಟ್ ಜೊತೆಯಾಟದಲ್ಲಿ 203 ರನ್ ಸೇರಿಸಿದರು. ಜಡೇಜ ಅವರು (89; 137ಎಸೆತ) ಶತಕ ತಪ್ಪಿಸಿಕೊಂಡರು.
ಕ್ರೀಸ್‌ಗೆ ಬಂದ ವಾಷಿಂಗ್ಟನ್ ಸುಂದರ್ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ವಾಷಿಂಗ್ಟನ್ ಮತ್ತು ಗಿಲ್ 144 ರನ್ ಸೇರಿಸಿದರು. ಎಡಗೈ ಸ್ಪಿನ್ನರ್ ಕುಲದೀಪ್ ಅವರನ್ನು ಆಯ್ಕೆ ಮಾಡದೇ ವಾಷಿಂಗ್ಟನ್ ಅವರಿಗೆ ಸ್ಥಾನ ನೀಡಿದ್ದಕ್ಕಾಗಿ ಬುಧವಾರ ಹಲವು ಟೀಕೆಗಳು ವ್ಯಕ್ತವಾಗಿದ್ದವು.
ಆದರೆ ಎಲ್ಲ ಟೀಕೆ, ವ್ಯಂಗ್ಯಗಳಿಗೆ ತಮ್ಮ ಸಾಮರ್ಥ್ಯ ಮತ್ತು ಚೈತನ್ಯಯುತ ಆಟದ ಮೂಲಕ ಉತ್ತರ ಕೊಡುವ ಸಾಮರ್ಥ್ಯ ಶ್ರೇಷ್ಠ ಆಟಗಾರರಿಗೆ ಮಾತ್ರ ಇರುತ್ತದೆ. ಆ ಕಾರ್ಯವನ್ನು ಇಲ್ಲಿ ಗಿಲ್ ಮಾಡಿದರು. ಅವರು 380 ಎಸೆತಗಳನ್ನು ಎದುರಿಸಿದರು. ಈ ಪೈಕಿ ಶೇ 93ರಷ್ಟು ನಿಯಂತ್ರಣ ಸಾಧಿಸಿದ್ದರು. ಆದರೆ 250 ರನ್ ಮುಟ್ಟುವ ಹಂತದಲ್ಲಿ ಒಂದು ಕೆಟ್ಟ ಹೊಡೆತವನ್ನು ಪ್ರಯೋಗಿಸಿದ್ದು ಬಿಟ್ಟರೆ ಉಳಿದೆಲ್ಲವೂ ನಿಖರವಾಗಿದ್ದವು. ಸುಮಾರು ಆರು ತಾಸುಗಳ ಕಾಲ ಕ್ರೀಸ್‌ನಲ್ಲಿದ್ದ ಬ್ಯಾಟರ್ ಇಷ್ಟೊಂದು ನಿಖರತೆ ಸಾಧಿಸಿದ್ದು ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬಬಲ್ಲ ಆಟಗಾರನೆಂಬ ಭರವಸೆಗೆ ತಕ್ಕಂತೆ ಗಿಲ್ ಆಡಿದರು.
ಪಿಚ್ ಚೆನ್ನಾಗಿಯೇ ಇತ್ತು. ಆದರೆ ಇಂಗ್ಲೆಂಡ್ ದಾಳಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರಂತಹ ಪರಿಣಾಮಕಾರಿ ಬೌಲರ್‌ಗಳ ಕೊರತೆ ಕಂಡಿತು. ಆದರೆ ಸ್ಟೋಕ್ಸ್, ಕ್ರಿಸ್ ವೋಕ್ಸ್, ಜೋಶ್ ಟಂಗ್ ಮತ್ತು ಬ್ರೈಡನ್ ಕಾರ್ಸ್ ಅವರು ಗಿಲ್
ಅವರಿಗೆ ಕಠಿಣ ಸವಾಲು ಒಡ್ಡುವ ತಂತ್ರಗಾರಿಕೆ ಅನುಸರಿಸಿದರು.ಮೊದಲಿಗೆ ಶಾರ್ಟ್ ಬಾಲ್ ಅಸ್ತ್ರಗಳನ್ನು ಪ್ರಯೋಗಿಸಿದರು. ನಾಯಕ ಸ್ಟೋಕ್ಸ್ ಅವರು ಆನ್‌ಸೈಡ್‌ನಲ್ಲಿ ತಮ್ಮ ಫೀಲ್ಡರ್
ಗಳನ್ನು ನಿಯೋಜಿಸಿದರು. ಬೌಲರ್‌ಗಳು ಗಿಲ್ ಅವರ ಪಕ್ಕೆಲುಬಿಗೆ ಗುರಿಯಿಟ್ಟು ಎಸೆತಗಳನ್ನು ಹಾಕಿದರು. ಆದರೆ ಭಾರತದ ಬ್ಯಾಟರ್ ಆ ಎಸೆತಗಳನ್ನು ಲೀಲಾ ಜಾಲವಾಗಿ ಎದುರಿಸಿದರು. ನಿರಂ ತರವಾಗಿ ಪುಲ್ ಮಾಡುತ್ತಿದ್ದರೂ ಚೆಂಡು ನೆಲಕಚ್ಚಿ ಸಾಗುವಂತೆ ನೋಡಿಕೊಂಡರು.
ನಂತರ ಫುಲ್ಲರ್ ಲೆಂಗ್ತ್ ತಂತ್ರಗಾರಿಕೆಗೆ ಸ್ಟೋಕ್ಸ್ ಬಳಗ ಮೊರೆಹೋಯಿತು. ಆಫ್‌ಸೈಡ್‌ನಲ್ಲಿ ಹೆಚ್ಚು ಫೀಲ್ಡರ್‌ಗಳನ್ನು ನಿಯೋಜಿಸಿದರು. ಬೌಲರ್‌ಗಳು ಆಫ್‌ಸ್ಟಂಪ್ ಗುರಿಯಾಗಿಸಿ ಎಸೆತಗಳನ್ನು ಹಾಕಿದರು. ಆದರೆ ಗಿಲ್ ಅವುಗಳಿಗೂ ಪ್ರತ್ಯುತ್ತರ ನೀಡಿದರು. ಗ್ಯಾಪ್‌ಗಳಲ್ಲಿ ಚೆಂಡನ್ನು ತಳ್ಳಿ ರನ್ ಸೂರೆ ಮಾಡಿದರು. ಎಲ್ಲ ತಂತ್ರಗಳೂ ವಿಫಲ ವಾದಾಗ ಬೌಲರ್‌ಗಳು ತಣ್ಣಗಾದರು. ಬ್ಯಾಟರ್ ತಪ್ಪೆಸುಗುವುದನ್ನು ಕಾಯುತ್ತ ಬೌಲಿಂಗ್ ಮಾಡಿದರು. ಆದರೆ ಗಿಲ್ ಮೈಮರೆಯದೇ ದಾಖಲೆಯತ್ತ ಹೆಜ್ಜೆ ಹಾಕಿದರು. 311 ಎಸೆತಗಳಲ್ಲಿ ದ್ವಿಶತಕದ ಗಡಿ ಮುಟ್ಟಿ ಸಂಭ್ರಮಿಸಿದರು.
ಆಂಗ್ಲರಿಗೆ ಆರಂಭಿಕ ಆಘಾತ: ಭಾರತದ ವೇಗಿ ಆಕಾಶ್ ದೀಪ್ ಆಂಗ್ಲರಿಗೆ ಆರಂಭದಲ್ಲೇ ಆಘಾತ ನೀಡಿದರು. 13 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಪತನವಾದವು. ಆರಂಭಿಕ ಆಟಗಾರ ಬೆನ್ ಡಕೆಟ್ ಮತ್ತು ಓಲಿ ಪೋಪ್ ಅವರಿಗೆ ಖಾತೆ ತೆರೆಯಲು ಅವಕಾಶ ನೀಡದೆ ಆಕಾಶ್ ಪೆವಿಲಿಯನ್ ದಾರಿ ತೋರಿಸಿದರು. ನೆಲೆಯೂರಲು ಪ್ರಯತ್ನಿಸುತ್ತಿದ್ದ ಜ್ಯಾಕ್ ಕ್ರಾಲಿ (19) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಜೋ ರೂಟ್ (ಔಟಾಗದೇ 18) ಮತ್ತು ಹ್ಯಾರಿ ಬ್ರೂಕ್ (ಔಟಾಗದೇ 30) ಕ್ರೀಸ್‌ನಲ್ಲಿದ್ದಾರೆ.
ಗಿಲ್ ದಾಖಲೆ
ಶುಭಮನ್ ಗಿಲ್ ಇಲ್ಲಿ ದ್ವಿಶತಕ ಗಳಿಸುವುದರೊಂದಿಗೆ ದಿಗ್ಗಜರಾದ ಸುನಿಲ್ ಗಾವಸ್ಕರ್ (221 ರನ್) ಮತ್ತು ರಾಹುಲ್ ದ್ರಾವಿಡ್ ಅವರ ದಾಖಲೆಗಳನ್ನು ಮೀರಿ ನಿಂತರು. ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲಿಸಿದ ಭಾರತೀಯ ಬ್ಯಾಟರ್ ಆದರು.
ಅಲ್ಲದೇ ನಾಯಕನಾಗಿ ದ್ವಿಶತಕ ಹೊಡೆದ ಪಟ್ಟಿಯಲ್ಲಿ ಸ್ಥಾನ ಪಡೆದರು. ಮನ್ಸೂರ್ ಅಲಿಖಾನ್ ಪಟೌಡಿ, ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರಸಿಂಗ್ ಧೋನಿ ಅವರ ನಂತರದ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.