ADVERTISEMENT

IND vs ENG Highlights: ಗಿಲ್ ವಿಶಿಷ್ಟ ದಾಖಲೆ, ಕೊಹ್ಲಿಗೆ ಅದಿಲ್ ಸಂಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2025, 3:09 IST
Last Updated 13 ಫೆಬ್ರುವರಿ 2025, 3:09 IST
<div class="paragraphs"><p>ಶುಭಮನ್ ಗಿಲ್, ವಿರಾಟ್ ಕೊಹ್ಲಿ</p></div>

ಶುಭಮನ್ ಗಿಲ್, ವಿರಾಟ್ ಕೊಹ್ಲಿ

   

(ಚಿತ್ರ ಕೃಪೆ: X/@BCCI)

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ 142 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಮೊದಲು ನಡೆದ ಐದು ಪಂದ್ಯಗಳ ಟ್ವೆಂಟಿ-20 ಟೂರ್ನಿಯಲ್ಲೂ ಭಾರತ 4-1 ಅಂತರದ ಗೆಲುವು ಸಾಧಿಸಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಶುಭಮನ್ ಗಿಲ್ ಶತಕದ (112) ನೆರವಿನಿಂದ 356 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಶ್ರೇಯಸ್ ಅಯ್ಯರ್ (78), ವಿರಾಟ್ ಕೊಹ್ಲಿ (52) ಹಾಗೂ ಕೆ.ಎಲ್. ರಾಹುಲ್ (40) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಈ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ 34.2 ಓವರ್‌ಗಳಲ್ಲಿ 214 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಗಿಲ್ ವಿಶಿಷ್ಟ ದಾಖಲೆ...

ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕ ಶುಭಮನ್ ಗಿಲ್ ಏಳನೇ ಶತಕದ ಸಾಧನೆ ಮಾಡಿದರು. 102 ಎಸೆತಗಳಲ್ಲಿ 14 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 112 ರನ್ ಗಳಿಸಿದರು.

ಆ ಮೂಲಕ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎಲ್ಲ ಮೂರೂ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅಪರೂಪದ ದಾಖಲೆಗೆ ಪಾತ್ರರಾದರು.

ಗಿಲ್ ಪಾಲಿಗೆ ಅಹಮದಾಬಾದ್ ಅದೃಷ್ಟದ ಮೈದಾನ ಎನಿಸಿದ್ದು, ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲೂ ಶತಕ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲೂ ಇದೇ ಮೈದಾನದಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ ಒಂದೇ ಮೈದಾನದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ವಿಶ್ವದ ಐದನೇ ಬ್ಯಾಟರ್ ಎನಿಸಿದ್ದಾರೆ.

ತಮ್ಮ 50ನೇ ಏಕದಿನ ಪಂದ್ಯದಲ್ಲಿ ಗಿಲ್ ಶತಕ ಗಳಿಸಿದ್ದಾರೆ.

ಕೊಹ್ಲಿಗೆ ಅದಿಲ್ ಸಂಕಟ...

ವಿರಾಟ್ ಕೊಹ್ಲಿ ಏಕದಿನದಲ್ಲಿ 73ನೇ ಅರ್ಧಶತಕದ ಸಾಧನೆ ಮಾಡಿದರು. ಆದರೆ ಮತ್ತೊಮ್ಮೆ ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್‌ಗೆ ಕೊಹ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11ನೇ ಸಲ ಅದಿಲ್ ಬೌಲಿಂಗ್‌ನಲ್ಲಿ ಕೊಹ್ಲಿ ಔಟ್ ಆಗಿದ್ದಾರೆ. ಕೊಹ್ಲಿ ಪಾಲಿಗೆ ಅದಿಲ್ ದುಃಸ್ವಪ್ನವಾಗಿ ಕಾಡಿದ್ದಾರೆ.

ಅಹಮದಾಬಾದ್‌ನಲ್ಲಿ ಗರಿಷ್ಠ ಮೊತ್ತ...

356 ಅಹಮದಾಬಾದ್ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪೇರಿಸಿದ ಗರಿಷ್ಠ ಮೊತ್ತವಾಗಿದೆ.

142 ರನ್ ಅಂತರದ ಗೆಲುವು...

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗಳಿಸಿದ ಎರಡನೇ ಅತಿ ದೊಡ್ಡ ಗೆಲುವು (ರನ್ ಅಂತರ) ಇದಾಗಿದೆ. 2008ರಲ್ಲಿ ರಾಜ್‌ಕೋಟ್‌ನಲ್ಲಿ 158 ರನ್ ಅಂತರದ ಜಯ ಗಳಿಸಿತ್ತು.

ಇಂಗ್ಲೆಂಡ್‌ಗೆ ಸತತ 4ನೇ ಸರಣಿ ಸೋಲು...

ಭಾರತದ ವಿರುದ್ಧ ಸೇರಿದಂತೆ ಇಂಗ್ಲೆಂಡ್ ಸತತ ನಾಲ್ಕನೇ ಸಲ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.