ADVERTISEMENT

IND vs ENG 5th Test: ಇಂಗ್ಲೆಂಡ್‌ಗೆ ಭಾರತದ ವೇಗಿಗಳ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2025, 18:56 IST
Last Updated 1 ಆಗಸ್ಟ್ 2025, 18:56 IST
<div class="paragraphs"><p>ಟೀಮ್ ಇಂಡಿಯಾ</p></div>

ಟೀಮ್ ಇಂಡಿಯಾ

   

(ಪಿಟಿಐ ಚಿತ್ರ)

ಲಂಡನ್: ವೇಗದ ಬೌಲರ್‌ಗಳು ಓವಲ್ ಕ್ರೀಡಾಂಗಣದ ಹಸಿರು ಅಂಗಣದಲ್ಲಿ ತಮ್ಮ ಪಾರಮ್ಯ ಮುಂದುವರಿಸಿದರು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಬ್ಯಾಟರ್‌ಗಳು ಪರದಾಡಿದರು. ಅದರಿಂದಾಗಿ  ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟವಾದ ಶುಕ್ರವಾರ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. 

ADVERTISEMENT

ಗುರುವಾರ ಆತಿಥೇಯ ತಂಡದ ಬೌಲರ್‌ಗಳು ಪ್ರತಾಪ ಮೆರೆದಿದ್ದರು. ವೇಗಿ ಗಸ್ ಅಟ್ಕಿನ್ಸನ್ (2.4–1–2–3)ಅವರ ಅಮೋಘ ಸ್ಪೆಲ್‌ನಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಅವರು ಮತ್ತೆರಡು ವಿಕೆಟ್ ಪಡೆದು (33ಕ್ಕೆ5) ಪಂಚಗುಚ್ಛ ಪೂರ್ಣಗೊಳಿಸಿಕೊಂಡರು.


ಅವರಿಗೆ ಉತ್ತಮ ಬೆಂಬಲ ನೀಡಿದ ಜೋಶ್ ಟಂಗ್ (57ಕ್ಕೆ3) ಅವರಿಂದಾಗಿ ಭಾರತ ತಂಡದ ಮೊದಲ ಇನಿಂಗ್ಸ್‌ ಬೇಗ ಮುಕ್ತಾಯವಾಯಿತು.  69.4 ಓವರ್‌ ಗಳಲ್ಲಿ 224 ರನ್ ಗಳಿಸಿತು. ಇದರಲ್ಲಿ ಮೊದಲ ದಿನದಾಟದಲ್ಲಿ ಭಾರತವು 6ಕ್ಕೆ 204 ರನ್ ಪೇರಿಸಿತ್ತು. ಎರಡನೇ ದಿನದಲ್ಲಿ 20 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. 

ಇಂಗ್ಲೆಂಡ್ ಇನಿಂಗ್ಸ್‌ ಆರಂಭ ಚೆನ್ನಾಗಿತ್ತು. ಆರಂಭಿಕ ಜೋಡಿ ಜಾಕ್ ಕ್ರಾಲಿ (64 ರನ್) ಮತ್ತು ಬೆನ್ ಡಕೆಟ್ (43 ರನ್) ಅವರ ಬೀಸಾಟ ರಂಗೇರಿತು. ಅದರಿಂದಾಗಿ ಊಟದ ವಿರಾಮದ ಹೊತ್ತಿಗೆ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 109 ರನ್ ಗಳಿಸಿತು.

ಇಲ್ಲಿಂದ ಮುಂದೆ ಭಾರತದ ಬೌಲರ್‌ಗಳು ಆರ್ಭಟಿಸಿದರು. ಮೊಹಮ್ಮದ್ ಸಿರಾಜ್ (86ಕ್ಕೆ4), ಪ್ರಸಿದ್ಧ ಕೃಷ್ಣ (62ಕ್ಕೆ4) ಮತ್ತು ಆಕಾಶ್ ದೀಪ್ (80ಕ್ಕೆ1) ಬ್ಯಾಟರ್‌ಗಳನ್ನು ಕಾಡಿದರು. ಹೀಗಾಗಿ, ಇಂಗ್ಲೆಂಡ್‌ 51.2 ಓವರ್‌ಗಳಲ್ಲಿ 247 ರನ್‌ ಗಳಿಸಿ ಆಲೌಟ್‌ ಆಯಿತು. 

ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ಎರಡನೇ ದಿನದಾಟದ ಮುಕ್ತಾಯಕ್ಕೆ 18 ಓವರ್‌ಗಳಲ್ಲಿ 2 ವಿಕೆಟ್‌ಗೆ 75 ರನ್‌ ಗಳಿಸಿದೆ. ಮೊದಲ ಇನಿಂಗ್ಸ್‌ನ 23 ರನ್‌ಗಳ ಹಿನ್ನಡೆಯನ್ನು ಚುಕ್ತಾಗೊಳಿಸಿ, 52 ರನ್‌ ಮುನ್ನಡೆ ಸಾಧಿಸಿದೆ.

ಹಸಿರು ಅಂಕಣದಲ್ಲಿ ಚೆಂಡಿನ ವೇಗ, ಬೌನ್ಸ್ ಮತ್ತು ಸ್ವಿಂಗ್‌ಗಳು ಉನ್ನತಮಟ್ಟದಲ್ಲಿದ್ದವು. ಆದರೂ ಕ್ರಾಲಿ ಮತ್ತು ಡಕೆಟ್ ಅವರು ಒಂಚೂರೂ ವಿಚಲಿತರಾಗಲಿಲ್ಲ. ‘ಬಾಝ್‌ಬಾಲ್’ ಆಟ ಮುನ್ನೆಲೆಗೆ ತಂದರು.  ಅದರಲ್ಲೂ 5.7 ಅಡಿ ಎತ್ತರದ ಎಡಗೈ ಬ್ಯಾಟರ್ ಡಕೆಟ್ ಅವರು ಆಕಾಶ್ ಮತ್ತು ಸಿರಾಜ್ ಅವರ ಎಸೆತಗಳನ್ನು ಕ್ರೀಸ್‌ನಿಂದ ಮುನ್ನುಗ್ಗಿ ಬಂದು ಆಡಿದರು. ಚೆಂಡನ್ನು ಕವರ್ಸ್ ಪೊಸಿಷನ್ ದಾಟಿಸುವುತ್ತಲೇ ಹೆಚ್ಚು ಗಮನವಿಟ್ಟರು. ಅಲ್ಲದೇ ಸ್ಕೂಪ್ ಮತ್ತು ರಿವರ್ಸ್ ಸ್ವೀಪ್‌ಗಳ ಮೂಲಕವೂ ರನ್‌ ಸೂರೆ ಮಾಡಿದರು.

ಇನ್ನೊಂದು ಬದಿಯಲ್ಲಿ  ಆರೂವರೆ ಅಡಿ ಎತ್ತರದ ಕ್ರಾಲಿ ಅವರ ಮನಮೋಹಕ ಡ್ರೈವ್‌ಗಳ ಆಟಕ್ಕೆ ತಡೆಯೊಡ್ಡುವ ಬೌಲರ್‌ಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಆಗಸ್ಟ್‌ 5ರಿಂದ ಆರಂಭವಾಗಲಿರುವ ಹಂಡ್ರೆಡ್ ಬಾಲ್ ಕ್ರಿಕೆಟ್‌ಗಾಗಿ ಕ್ರಾಲಿ ಅವರು ಪೂರ್ವಾಭ್ಯಾಸ ನಡೆಸುವ ರೀತಿಯಲ್ಲಿ ಇಲ್ಲಿ ಆಡಿದರು! 

ಸ್ವಿಂಗ್ ಆಗಿ ಬರುತ್ತಿದ್ದ ಎಸೆತಗಳನ್ನು ಎದುರಿಸುವಲ್ಲಿ ಅವರು ನಿಖರವಾಗಿ ಪಾದಚಲನೆ ಪ್ರದರ್ಶಿಸಿದರು. ಇದ ರಿಂದಾಗಿ ಬಹಳ ಹೊತ್ತು ಬೌಲರ್‌ಗಳಿಗೆ ಪರಿಹಾರದ ದಾರಿ ಸಿಗಲಿಲ್ಲ. ಆದರೆ ಊಟಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಆಕಾಶ್ ಮೊದಲ ಬೇಟೆಯಾಡಿದರು. ಡೆಕೆಟ್ ಅವರು ಕಟ್ ಮಾಡಲು ಯತ್ನಿಸಿದ ಚೆಂಡು ವಿಕೆಟ್‌ಕೀಪರ್ ಧ್ರುವ ಜುರೇಲ್ ಗ್ಲೌಸ್ ಸೇರಿತು. ಆಕಾಶ್ ಸಂಭ್ರಮಿಸಿದರು.  ಉಳಿದ ಬೌಲರ್‌ಗಳಲ್ಲಿ ಹುರುಪು ಪುಟಿದೆದ್ದಿತು.

ಪ್ರಸಿದ್ಧ ಎಸೆತದಲ್ಲಿ ರವೀಂದ್ರ ಜಡೇಜಗೆ ಕ್ಯಾಚಿತ್ತ ಕ್ರಾಲಿ ಆಟಕ್ಕೂ ತೆರೆಬಿತ್ತು. ‘ಸಿಂಹದ ಗುಂಡಿಗೆ’ಯ ಬೌಲರ್ ಸಿರಾಜ್ ಗರ್ಜನೆಗೆ ಇಂಗ್ಲೆಂಡ್ ಬ್ಯಾಟಿಂಗ್ ಪಡೆ ತತ್ತರಿಸಿತು. ಹಂಗಾಮಿ ನಾಯಕ ಓಲಿ ಪೋಪ್, ಜೋ ರೂಟ್ ಮತ್ತು ಜೇಕಬ್ ಬೆಥೆಲ್ ಅವರೆಲ್ಲರೂ ಸಿರಾಜ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದರು. ಅರ್ಧಶತಕ ಗಳಿಸಿದ ಹ್ಯಾರಿ ಬ್ರೂಕ್‌ (53;64ಎ) ಕೂಡಾ ಕೊನೆಯಲ್ಲಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು.

ಇನ್ನೊಂದು ಕಡೆಯಿಂದ ಕನ್ನಡಿಗಪ್ರಸಿದ್ಧಕೃಷ್ಣ ಅವರೂ ಸಿರಾಜ್‌ ಅವರೊಂದಿಗೆ ಜೊತೆಯಾಟವಾಡಿದರು.
ಜೆಮಿ ಸ್ಮಿತ್, ಜೆಮಿ ಓವರ್ಟನ್ ಮತ್ತು ಗಸ್ ಅಟ್ಕಿನ್ಸನ್ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಆಡಿದ್ದ ಪ್ರಸಿದ್ಧ ನಂತರದ ಎರಡರಲ್ಲಿ ಸ್ಥಾನ ಪಡೆದಿರಲಿಲ್ಲ. ಈಗ ಇಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು.

ಜೈಸ್ವಾಲ್‌ ಆಸರೆ: ಭಾರತದ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ (ಔಟಾಗದೇ 51;49ಎ) ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ, ಅನುಭವಿ ಕೆ.ಎಲ್‌.ರಾಹುಲ್‌ (7) ಮತ್ತು ಸಾಯಿ ಸುದರ್ಶನ್‌ (11) ಮತ್ತೆ ನಿರಾಸೆ ಮೂಡಿಸಿದರು. ಜೈಸ್ವಾಲ್‌ ಅವರೊಂದಿಗೆ ಆಕಾಶ್‌ ದೀಪ್‌ (ಔಟಾಗದೇ 4) ಮೂರನೇ ದಿನಕ್ಕೆ ಆಟವನ್ನು
ಕಾಯ್ದಿರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.