ಜಸ್‌ಪ್ರೀತ್ ಬೂಮ್ರಾ
(ಪಿಟಿಐ ಚಿತ್ರ)
ಎಜ್‌ಬಾಸ್ಟನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಿರುವುದು ಮಾಜಿ ಕೋಚ್ ರವಿ ಶಾಸ್ತ್ರಿ ಅಸಮಾಧಾನಕ್ಕೆ ಕಾರಣವಾಗಿದೆ.
ಐದು ಪಂದ್ಯಗಳ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಭಾರತ 0-1ರ ಅಂತರದ ಹಿನ್ನಡೆಯಲ್ಲಿದೆ. ಇದರಿಂದಾಗಿ ಈ ಪಂದ್ಯವು ಭಾರತದ ಪಾಲಿಗೆ ಅತ್ಯಂತ ಮಹತ್ವದೆನಿಸಿದೆ. ಹಾಗಿದ್ದರೂ ಬೂಮ್ರಾಗೆ ವಿಶ್ರಾಂತಿ ನೀಡಿರುವುದು ವೀಕ್ಷಕ ವಿವರಣೆಗಾರ ಕೂಡ ಆಗಿರುವ ರವಿ ಶಾಸ್ತ್ರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ರವಿ ಶಾಸ್ತ್ರಿ ಹೇಳಿಕೆಯನ್ನು 'ಎನ್‌ಡಿಟಿವಿ' ವರದಿ ಮಾಡಿದೆ.
'ಇದು ಬಹಳ ಮುಖ್ಯವಾದ ಪಂದ್ಯ. ಭಾರತೀಯ ತಂಡದ ಆಟಗಾರರಿಗೆ ಒಂದು ವಾರದ ರಜೆ ದೊರಕಿದೆ. ಆದರೂ ಬೂಮ್ರಾ ಈ ಪಂದ್ಯವನ್ನು ಆಡುತ್ತಿಲ್ಲ ಎಂದು ತಿಳಿದುಕೊಳ್ಳಲು ನನಗೆ ಆಶ್ಚರ್ಯವಾಗುತ್ತಿದೆ. ಭಾರತದ ಪಾಲಿಗೆ ಈ ಪಂದ್ಯವು ಮಹತ್ವದ್ದಾಗಿದೆ. ಹಾಗಾಗಿ ಬೇರೆ ಯಾರಿಗಿಂತಲೂ ಮಿಗಿಲಾಗಿ ಬೂಮ್ರಾ ಈ ಪಂದ್ಯವನ್ನು ಆಡಬೇಕಿತ್ತು' ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
'ತಂಡದ ಆಡುವ ಹನ್ನೊಂದರ ಬಳಗದಲ್ಲಿ ಯಾರು ಆಡಬೇಕೆಂದು ಎಂದು ನಾಯಕ ಹಾಗೂ ಕೋಚ್ ನಿರ್ಧರಿಸಬೇಕು' ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
'ಲಾರ್ಡ್ಸ್ (3ನೇ ಟೆಸ್ಟ್) ಪಂದ್ಯ ನಂತರ ಬರಹುದು. ಅದಕ್ಕೂ ಮೊದಲು ತಿರುಗೇಟು ನೀಡುವ ಪಂದ್ಯ ಇದಾಗಿತ್ತು. ಸರಣಿಯಲ್ಲಿ 1-1ರ ಸಮಬಲ ಸಾಧಿಸಿದ ಬಳಿಕ ಲಾರ್ಡ್ಸ್‌ನಲ್ಲಿ ಆಡಬೇಕೇ ಬೇಡವೋ ಎಂಬುದನ್ನು ಆಟಗಾರನ ಆಯ್ಕೆಗೆ ಬಿಡಬಹುದಿತ್ತು. ಈ ಪಂದ್ಯವನ್ನು ಗೆದ್ದರೆ ಆತ ಲಾರ್ಡ್ಸ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೀರಾ? ಖಂಡಿತವಾಗಿಯೂ ಇಲ್ಲ. ಭಾರತದ ಪಾಲಿಗೆ ಇದು ನಿರ್ಣಾಯಕ ಪಂದ್ಯ' ಎಂದು ಒತ್ತಿ ಹೇಳಿದ್ದಾರೆ.
'ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳ ಸೋಲು ಎದುರಾಗಿದೆ. ಆಸ್ಟ್ರೇಲಿಯಾದಲ್ಲೂ ಮೂರು ಪಂದ್ಯಗಳನ್ನು ಸೋತಿದ್ದೇವೆ. ಇಲ್ಲಿಯೂ ಮೊದಲ ಪಂದ್ಯದಲ್ಲಿ ಸೋಲಾಗಿದೆ. ಹಾಗಿರುವಾಗ ಗೆಲುವಿನ ಹಾದಿಗೆ ಮರಳುವುದು ಅತಿ ಮುಖ್ಯವೆನಿಸಿದೆ. ನಿಮ್ಮ ತಂಡದಲ್ಲಿ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಇದ್ದಾರೆ. ಏಳು ದಿನಗಳ ವಿಶ್ರಾಂತಿಯ ಬಳಿಕಯೂ ಅವರಿಗೆ ವಿಶ್ರಾಂತಿ ನೀಡಿದ್ದೀರಿ. ಇದನ್ನು ನಂಬಲು ಸ್ವಲ್ಪ ಕಷ್ಟಕರ' ಎಂದು ಹೇಳಿದ್ದಾರೆ.
ಸರಣಿ ಆರಂಭಕ್ಕೂ ಮೊದಲೇ ಬೂಮ್ರಾ ಅವರು ಮೂರು ಪಂದ್ಯಗಳಲ್ಲಿ ಮಾತ್ರ ಆಡುತ್ತಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿರುವುದು ತನ್ನಲ್ಲಿ ಅಚ್ಚರಿ ಉಂಟುಮಾಡಿದೆ ಎಂದೂ ರವಿ ಶಾಸ್ತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.