ADVERTISEMENT

ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2026, 6:52 IST
Last Updated 4 ಮಾರ್ಚ್ 2026, 6:52 IST
<div class="paragraphs"><p>ಭಾರತ ಹಾಗೂ ಇಂಗ್ಲೆಂಡ್ ಆಟಗಾರರು</p></div>

ಭಾರತ ಹಾಗೂ ಇಂಗ್ಲೆಂಡ್ ಆಟಗಾರರು

   

ರಾಯಿಟರ್ಸ್ ಚಿತ್ರ

ಮುಂಬೈ: ಟಿ20 ವಿಶ್ವಕಪ್‌ನ 2ನೇ ಸೆಮಿಫೈನಲ್‌ ಪಂದ್ಯವು ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಾಳೆ (ಮಾರ್ಚ್5) ಮುಖಾಮಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್ ಪ್ರವೇಶ ಪಡೆದುಕೊಳ್ಳಲಿದೆ.

ADVERTISEMENT

5 ಬಾರಿ ಮುಖಾಮುಖಿ

ಟಿ20 ವಿಶ್ವಕಪ್ ಟ್ರೋಫಿಯು 2007ರಲ್ಲಿ ಆರಂಭವಾಯಿತು. ಅಂದಿನಿಂದ ಇಲ್ಲಿಯವರೆಗೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್ ತಂಡವು 3 ಬಾರಿ ಗೆಲುವು ಸಾಧಿಸಿದೆ.

2007 ಭಾರತಕ್ಕೆ ಗೆಲುವು

ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಮೊದಲ ಬಾರಿಗೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾದಾಗ, ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 18 ರನ್‌ಗಳ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನ 6 ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದರು.

2009 ಇಂಗ್ಲೆಂಡ್‌ಗೆ ರೋಚಕ ಜಯ

ಲಾರ್ಡ್ಸ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಅಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 153 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಭಾರತ ತಂಡವು 150 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 3 ರನ್‌ಗಳ ಸೋಲು ಅನುಭವಿಸಿತ್ತು.

2012 ಭಾರತಕ್ಕೆ ಬೃಹತ್ ಗೆಲುವು

ಕೊಲೊಂಬೊದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡವು 90 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಕೇವಲ 80 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತ್ತು.

2022 ಸೇಡು ತೀರಿಸಿಕೊಂಡ ಆಂಗ್ಲರು

2012ರ ಬಳಿಕ 10 ವರ್ಷಗಳ ನಂತರ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 168 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಜಾಸ್ ಬಟ್ಲರ್ ಹಾಗೂ ಅಲೆಕ್ಸ್ ಹೆಲ್ ಮುರಿಯದ ಜೊತೆಯಾಟದ ನೆರವಿನಿಂದ ಕೇವಲ 16 ಓವರ್‌ಗಳಲ್ಲಿ ಗುರಿ ತಲುಪಿ ಭಾರತ ವಿರುದ್ಧ ಸೇಡು ತೀರಿಸಿಕೊಂಡಿತ್ತು.

2024ರಲ್ಲಿ 68 ರನ್‌ಗಳ ಜಯ

ಗಯಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 171 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 103 ರನ್‌ಗಳಿ ಆಲೌಟ್ ಆಗಿ 68 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

ಸದ್ಯ, ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಇತಿಹಾಸ ಗಮನಿಸಿದರೆ, ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್‌ನಲ್ಲಿ 5ರಲ್ಲಿ 3 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತದ ಪ್ರದರ್ಶನ ನೋಡಿದರೆ ಇಂಗ್ಲೆಂಡ್ ತಂಡಕ್ಕಿಂತಲೂ ಬಲಿಷ್ಠವಾಗಿದ್ದು, ಗೆಲ್ಲುವ ವಿಶ್ವಾಸದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.