ವಿರಾಟ್ ಹಾಗೂ ರಾಹುಲ್
-ಪಿಟಿಐ ಚಿತ್ರ
ವಡೋದರ: ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಮಿಂಚಿದರು. ಕೇವಲ ಏಳು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರೂ
ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜಯ ಗಳಿಸಲು ಪ್ರಮುಖ ಕಾರಣರಾದರು.
301 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆತಿಥೇಯ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 4 ವಿಕೆಟ್‌ಗಳಿಂದ ಗೆದ್ದಿತು. ವಿರಾಟ್ ಕೊಹ್ಲಿ (93; 91ಎಸೆತ), ನಾಯಕ ಶುಭಮನ್ ಗಿಲ್ (56;71ಎ) ಹಾಗೂ ಶ್ರೇಯಸ್ ಅಯ್ಯರ್ (49; 47ಎ) ಅವರು ಉಪಯುಕ್ತ ಕಾಣಿಕೆ ನೀಡಿದರು.
ಕಿವೀಸ್ ಬಳಗದ ಕೈಲ್ ಜೆಮಿಸನ್ (41ಕ್ಕೆ4) ಅವರು ಇನಿಂಗ್ಸ್‌ನಲ್ಲಿ ಇನ್ನೂ ಹತ್ತು ಓವರ್‌ಗಳು ಬಾಕಿಯಿದ್ದಾಗ ಮೂರು ವಿಕೆಟ್ ಕಬಳಿಸಿ ಆತಂಕ ಮೂಡಿಸಿದ್ದರು. ಆದರೆ ಕನ್ನಡಿಗ ಕೆ.ಎಲ್. ರಾಹುಲ್ (ಔಟಾಗದೇ 29; 21ಎ, 4X2, 6X1) ವಿಜಯದ ಸಿಕ್ಸರ್ ಹೊಡೆದು ತಂಡವನ್ನು ದಡ ಮುಟ್ಟಿಸಿದರು. ಹರ್ಷಿತ್ ರಾಣಾ ಕೂಡ 23 ಎಸೆತಗಳಲ್ಲಿ 29 ರನ್ ಹೊಡೆದರು.
ವಿರಾಟ್ ಆರ್ಭಟ: ಕೊತಂಬಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಟಾಸ್ ಗೆದ್ದ ಪ್ರವಾಸಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಡೆವೊನ್ ಕಾನ್ವೆ (56; 67ಎ, 4X6, 6X1) ಮತ್ತು ಹೆನ್ರಿ ನಿಕೊಲ್ಸ್ (62; 69ಎ, 4X8) ಮೊದಲ ವಿಕೆಟ್ ಜೊತೆಯಾಟದಲ್ಲಿ 117 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ವಿಜೃಂಭಿಸಿದ ಡ್ಯಾರಿಲ್ ಮಿಚೆಲ್ (84; 71ಎ, 4X6, 6X3) ಅವರ ಆಟದ ಬಲದಿಂದ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 300 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭಿಕ ಜೋಡಿ ರೋಹಿತ್ ಶರ್ಮಾ (26; 29ಎ, 4X3, 6X2) ಮತ್ತು ಗಿಲ್ ಅವರು ಎಚ್ಚರಿಕೆಯಿಂದ ಆಟವಾಡಿದರು. ಇದರಿಂದಾಗಿ ರನ್ ಗಳಿಕೆಯ ವೇಗ ಹೆಚ್ಚಿರಲಿಲ್ಲ. 9ನೇ ಓವರ್‌ನಲ್ಲಿ ಜೆಮಿಸನ್ ಎಸೆತದಲ್ಲಿ ರೋಹಿತ್ ಔಟಾದರು.
ಈ ಹಂತದಲ್ಲಿ ಕ್ರೀಸ್‌ಗೆ ಬಂದ ವಿರಾಟ್ ಇನಿಂಗ್ಸ್‌ನ ಹೊಣೆಯನ್ನು ತಮ್ಮ ಮೇಲೆಳೆದುಕೊಂಡರು. ಗಿಲ್ ಎಚ್ಚರಿಕೆಯಿಂದ ರನ್ ಗಳಿಸಿದರು. ಆದರೆ ಕೊಹ್ಲಿ ಎದುರಾಳಿಗಳ ಎಸೆತಗಳನ್ನು ಲೀಲಾಜಾಲವಾಗಿ ಬಡಿದಟ್ಟಿದರು. ಎಂಟು ಬೌಂಡರಿಗಳು ಅವರ ಬ್ಯಾಟ್‌ನಿಂದ ದಾಖಲಾದವು. ಒಂದು ಸಿಕ್ಸರ್ ಕೂಡ ಹೊಡೆದರು. ಅವರ ನೆಚ್ಚಿನ ಫ್ರಂಟ್‌ಫೂಟ್ ಹೊಡೆತಗಳು ಮತ್ತು ಸುಂದರವಾದ ಆನ್‌ಡ್ರೈವ್ ಅರಳಿದವು. ಪುಲ್ ಮೂಲಕ ಶಾರ್ಟ್‌ಫೈನ್ ಬೌಂಡರಿ ಕೂಡ
ತಮ್ಮದಾಗಿಸಿಕೊಂಡರು. ಒಂದೆರಡು ಎಸೆತಗಳಲ್ಲಿ ಅದೃಷ್ಟವೂ ಅವರಿಗೆ ಜೊತೆ ನೀಡಿತು. ಅದರಿಂದಾಗಿ ಅಲ್ಪ ಅಂತರದಲ್ಲಿ ಔಟಾಗುವುದು ತಪ್ಪಿತು. ಅವರು ಗಿಲ್ ಜೊತೆಗೆ 102 ಎಸೆತಗಳಲ್ಲಿ 118 ರನ್ ಸೇರಿಸಿದರು.
ಗಿಲ್ ಔಟಾದ ನಂತರ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಜೊತೆಗೆ 77 ರನ್ ಸೇರಿಸಿದರು. ಆದರೆ ಅವರಿಗೆ ಶತಕ ಪೂರ್ಣಗೊಳಿಸಲು ಜೆಮಿಸನ್ ಬಿಡಲಿಲ್ಲ. ಬ್ರೇಸ್‌ವೆಲ್ ಪಡೆದ ಕ್ಯಾಚ್‌ಗೆ ಕೊಹ್ಲಿ ನಿರ್ಗಮಿಸಿದರು. ಶ್ರೇಯಸ್ ಅವರಿಗೆ ಅರ್ಧಶತಕ ಮಾಡಲೂ ಜೆಮಿಸನ್ ಬಿಡಲಿಲ್ಲ. ಕ್ಲೀನ್‌ಬೌಲ್ಡ್ ಮಾಡಿದರು. ಜಡೇಜ ವಿಕೆಟ್ ಕೂಡ ಅವರಿಗೇ ಒಲಿಯಿತು.
ಸಂಕ್ಷಿಪ್ತ ಸ್ಕೋರು:
ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ300
(ಡೆವೊನ್ ಕಾನ್ವೆ 56, ಹೆನ್ರಿ ನಿಕೊಲ್ಸ್ 62, ಡ್ಯಾರಿಲ್ ಮಿಚೆಲ್ 84, ಮಿಚೆಲ್ ಹೇ 18, ಮೈಕೆಲ್ ಬ್ರೇಸ್‌ವೆಲ್ 16, ಕ್ರಿಸ್ಟನ್ ಕ್ಲಾರ್ಕ್ ಔಟಾಗದೇ 24, ಮೊಹಮ್ಮದ್ ಸಿರಾಜ್ 40ಕ್ಕೆ2, ಹರ್ಷಿತ್ ರಾಣಾ 65ಕ್ಕೆ2, ಪ್ರಸಿದ್ಧಕೃಷ್ಣ 60ಕ್ಕೆ2, ಕುಲದೀಪ್ ಯಾದವ್ 52ಕ್ಕೆ1)
ಭಾರತ: 49 ಓವರ್‌ಗಳಲ್ಲಿ 6ಕ್ಕೆ306 (ರೋಹಿತ್ ಶರ್ಮಾ 26, ಶುಭಮನ್ ಗಿಲ್ 56, ವಿರಾಟ್ ಕೊಹ್ಲಿ 93, ಶ್ರೇಯಸ್ ಅಯ್ಯರ್ 49, ಕೆ.ಎಲ್. ರಾಹುಲ್ ಔಟಾಗದೇ 29, ಹರ್ಷಿತ್ ರಾಣಾ 29, ಕೈಲ್ ಜೆಮಿಸನ್ 41ಕ್ಕೆ4, ಆದಿತ್ಯ ಅಶೋಕ್ 55ಕ್ಕೆ1, ಕ್ರಿಸ್ಟನ್ ಕ್ಲಾರ್ಕ್ 73ಕ್ಕೆ1)
ಫಲಿತಾಂಶ: ಭಾರತಕ್ಕೆ 4 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.
ಪಂದ್ಯದ ಆಟಗಾರ: ವಿರಾಟ್ ಕೊಹ್ಲಿ.
ಮುಂದಿನ ಪಂದ್ಯ: ಜನವರಿ 14 (ರಾಜಕೋಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.