ADVERTISEMENT

ಭಾರತ-ನ್ಯೂಜಿಲೆಂಡ್‌ ಟೆಸ್ಟ್‌ ಡ್ರಾ: ಕಿವೀಸ್‌ ಆಟಗಾರರನ್ನು ಕೊಂಡಾಡಿದ ತರೂರ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2021, 14:20 IST
Last Updated 29 ನವೆಂಬರ್ 2021, 14:20 IST
   

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಕಾನ್ಪುರದ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಸೋಲು ತಪ್ಪಿಸಿಕೊಳ್ಳಲು ನ್ಯೂಜಿಲೆಂಡ್‌ನ ಆಟಗಾರರು ನಡೆಸಿದ ಪ್ರಯತ್ನವನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸೋಮವಾರ ಹೊಗಳಿದ್ದಾರೆ.

ಭಾರತ ನೀಡಿದ 284 ರನ್‌ಗಳ ಗುರಿ ಬೆನ್ನುಹತ್ತಿದ್ದ ನ್ಯೂಜಿಲೆಂಡ್‌ 155ಕ್ಕೆ 9 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಭಾರತದ ಗೆಲುವಿಗೆ ಒಂದು ವಿಕೆಟ್ ಮಾತ್ರ ಬೇಕಿತ್ತು. ಆದರೆ, ಕೊನೆಯಲ್ಲಿ ಒಂದಾದ ರಚಿನ್‌ ರವೀಂದ್ರ ಮತ್ತು ಅಜಾಜ್‌ ಪಟೇಲ್‌ ಜೋಡಿ ಪಂದ್ಯ ಸೋಲದಂತೆ ನೋಡಿಕೊಂಡಿತು.

ADVERTISEMENT

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, 'ಟೆಸ್ಟ್‌ ಪಂದ್ಯ ಉಳಿಸಿಕೊಳ್ಳಲು 9 ಓವರ್‌ಗಳವರೆಗೆ ನಮ್ಮ ಬೌಲರ್‌ಗಳಿಗೆ ಪ್ರತಿರೋಧ ತೋರಿದ ಭಾರತ ಮೂಲದ ಇಬ್ಬರು ಕಿವೀಸ್‌ ಆಟಗಾರರಾದ ರಚಿನ್ ರವೀಂದ್ರ ಮತ್ತು ಅಜಾಜ್‌ ಪಟೇಲ್‌ಗೆ ಹ್ಯಾಟ್ಸ್ ಆಫ್. ನೈಟ್‌ವಾಚ್‌ಮ್ಯಾನ್ ಆಗಿ ಬಂದಿದ್ದ ವಿಲ್ ಸೊಮರ್ವಿಲ್ಲೆ ಅವರು 110 ಎಸೆತಗಳನ್ನು ಎದುರಿಸಿದ್ದೂ ಕೂಡ ಪ್ರಮುಖವೆಂದೇ ಸಾಬೀತಾಗಿದೆ. ಮುಂಬೈ ಟೆಸ್ಟ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲು ಬದಲಾವಣೆಗಳನ್ನು ಮಾಡಿಕೊಳ್ಳಬೇಕು,’ ಎಂದು ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಶ್ರೇಯಸ್ ಅಯ್ಯರ್ ಶತಕ ಹಾಗೂ ಶುಭಮನ್ ಗಿಲ್, ರವೀಂದ್ರ ಜಡೇಜಾ ಅರ್ಧಶತಕಗಳ ನೆರವಿನಿಂದ 10 ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತ್ತು. ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಭಾರತ ಪರ ಅಕ್ಷರ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿದ್ದ ಟೀಮ್ ಇಂಡಿಯಾ, ನಾಲ್ಕನೇ ದಿನದಾಟದ ಕೊನೇ ಹಂತದಲ್ಲಿ ಡಿಕ್ಲೇರ್ ಮಾಡಿಕೊಂಡಿತ್ತು. ಪರಿಣಾಮವಾಗಿ ನ್ಯೂಜಿಲೆಂಡ್‌ಗೆ ಗೆಲ್ಲಲು ಟೀಮ್ ಇಂಡಿಯಾ 284 ರನ್ ಗುರಿ ನೀಡಿತು. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.