ADVERTISEMENT

IND vs NZ: ಟಿ20ಯಲ್ಲಿ ಹೆಚ್ಚು ಬಾರಿ 50 ರನ್; ಕೊಹ್ಲಿ ದಾಖಲೆ ಮುರಿದ ರೋಹಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2021, 16:02 IST
Last Updated 21 ನವೆಂಬರ್ 2021, 16:02 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾದ ಬಳಿಕ ಮೊದಲ ಸರಣಿಯಲ್ಲಿ ಆಡುತ್ತಿರುವ ರೋಹಿತ್‌ ಶರ್ಮಾ, ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ಅವರು ಭಾಜನರಾಗಿದ್ದಾರೆ.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಮೊದಲು ಬ್ಯಾಟಿಂಗ್ ಮಾಡಿ, ನ್ಯೂಜಿಲೆಂಡ್‌ಗೆ185 ರನ್ ಗುರಿ ನೀಡಿದೆ. ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ 31 ಎಸೆತಗಳಲ್ಲಿ 56 ರನ್ ಗಳಿಸಿ ನೆರವಾದರು.

ಸರಣಿಯ ಮೊದಲೆರದು ಪಂದ್ಯಗಳಲ್ಲಿ ರೋಹಿತ್ ಕ್ರಮವಾಗಿ 48 ಮತ್ತು 55 ರನ್ ಗಳಿಸಿದ್ದರು.

ADVERTISEMENT

ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ, ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರ ಹೆಸರಲ್ಲಿ ಇದುವರೆಗೆ ಇತ್ತು. 95 ಪಂದ್ಯಗಳ 87 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 29 ಇನಿಂಗ್ಸ್‌ಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು. 119 ಪಂದ್ಯಗಳ111 ಇನಿಂಗ್ಸ್‌ಗಳಲ್ಲಿರೋಹಿತ್ 30 ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ.

ಉಳಿದಂತೆಪಾಕಿಸ್ತಾನದಬಾಬರ್ ಅಜಂ (25),ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (22) ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ (21) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.

150 ಸಿಕ್ಸರ್ ಸಾಧನೆ
ಪಂದ್ಯದಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದರೋಹಿತ್ ಚುಟುಕು ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟರ್ ಎಂಬ ಶ್ರೇಯಕ್ಕೂ ಭಾಜನರಾದರು.ಈ ಮಾದರಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿದಿರುವುದು ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಬ್ಯಾಟ್‌ನಿಂದ. ಗುಪ್ಟಿಲ್ ಬರೋಬ್ಬರಿ162 ಸಿಕ್ಸರ್ ಸಿಡಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (124), ಇಂಗ್ಲೆಂಡ್‌ನ ಎಯಾನ್ ಮಾರ್ಗನ್ (119) ಮತ್ತು ಆಸ್ಟ್ರೇಲಿಯಾದ ಆ್ಯರನ್ ಫಿಂಚ್ (113) ಈ ಪಟ್ಟಿಯಲ್ಲಿ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.